ಪ್ರೊ ಕಬಡ್ಡಿ ಲೀಗ್‌: ದಿಲ್ಲಿ-ಬಂಗಾಳ ಫೈನಲ್‌ಗೆ

Update: 2019-10-16 17:07 GMT

 ಅಹ್ಮದಾಬಾದ್, ಅ.14: ದಿಲ್ಲಿ ದಬಾಂಗ್ ಹಾಗೂ ಬಂಗಾಳ ವಾರಿಯರ್ಸ್ ತಂಡಗಳು ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿವೆ. ಅಕ್ಟೋಬರ್ 19ರಂದು ನಡೆಯಲಿರುವ ಫೈನಲ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿಗಾಗಿ ಉಭಯ ತಂಡಗಳು ಹೋರಾಟ ನಡೆಸಲಿವೆ.

 ಈ ವರ್ಷದ ಟೂರ್ನಿಯುದ್ದಕ್ಕೂ ಅತ್ಯಮೋಘ ಪ್ರದರ್ಶನ ನೀಡಿದ್ದ ದಿಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದರೆ, ಬಂಗಾಳ 2ನೇ ಸ್ಥಾನ ಪಡೆದಿತ್ತು. ದಿಲ್ಲಿ ಲೀಗ್ ಹಂತದಲ್ಲಿ ಆಡಿದ್ದ 22 ಪಂದ್ಯಗಳಲ್ಲಿ 15ರಲ್ಲಿ ಜಯ ಸಾಧಿಸಿದ್ದರೆ, ಬಂಗಾಳ 22ರಲ್ಲಿ 14ರಲ್ಲಿ ಗೆಲುವು ದಾಖಲಿಸಿತ್ತು.

ಬುಧವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವನ್ನು 44-38 ಅಂಕಗಳ ಅಂತರದಿಂದ ಮಣಿಸಿದ ದಿಲ್ಲಿ ತಂಡ ಮೊದಲ ಬಾರಿ ಫೈನಲ್ ಪ್ರವೇಶಿಸಿತು. ದಿಲ್ಲಿ ಪರ 15 ಅಂಕ ಗಳಿಸಿದ ನವೀನ್‌ಕುಮಾರ್ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದಾರೆ. ಚಂದನ್‌ ರಂಜಿತ್ 9 ಅಂಕ ಗಳಿಸಿದರು. ಬೆಂಗಳೂರು ಪರ ಎಂದಿನಂತೆ ಪವನ್‌ಕುಮಾರ್(18) ಏಕಾಂಗಿ ಹೋರಾಟ ನೀಡಿದರು.

ಎರಡನೇ ಸೆಮಿ ಫೈನಲ್‌ನಲ್ಲಿ ಬಂಗಾಳ ವಾರಿಯರ್ಸ್ ತಂಡ ಯು ಮುಂಬಾ ತಂಡವನ್ನು 37-35 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು. ಬಂಗಾಳದ ಪರ ಕನ್ನಡಿಗ ಸುಕೇಶ್ ಹೆಗ್ಡೆ(8)ಗರಿಷ್ಠ ಅಂಕ ಗಳಿಸಿದರು. ನಾಯಕ ಮಣಿಂದರ್ ಸಿಂಗ್ ಅನುಪಸ್ಥಿತಿಯಲ್ಲಿ ವಾರಿಯರ್ಸ್ ಸಂಘಟಿತ ಪ್ರದರ್ಶನ ನೀಡಿದ್ದು, ಸುಕೇಶ್ 8 ರೈಡ್ ಪಾಯಿಂಟ್ಸ್ ಮೂಲಕ ತಂಡಕ್ಕೆ ರೋಚಕ ಜಯ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News