ಮಾದಕ ದ್ರವ್ಯ ಪಾತಕಿಯ ಬಂಧಿತ ಮಗನನ್ನು ಬಿಡಿಸಿಕೊಂಡು ಹೋದ ಬಂದೂಕುಧಾರಿಗಳು

Update: 2019-10-18 17:25 GMT

ಮೆಕ್ಸಿಕೊ ಸಿಟಿ, ಅ. 18: ಮೆಕ್ಸಿಕೊದ ಮಾದಕ ದ್ರವ್ಯ ದಂಧೆಕೋರ ಜೋಕಿನ್ ‘ಎಲ್ ಚಾಪೊ’ ಗಝ್ಮನ್‌ನ ಬಂಧಿತ ಮಗನೊಬ್ಬನನ್ನು ಬಿಡಿಸುವುದಕ್ಕಾಗಿ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಅವನ ಬಂಟರು ಭದ್ರತಾ ಪಡೆಗಳನ್ನು ಸುತ್ತುವರಿದು, ಮಗನನ್ನು ಬಿಡಿಸಿಕೊಂಡು ಹೋಗಿರುವ ಘಟನೆಯೊಂದು ವರದಿಯಾಗಿದೆ.

ಮೊದಲು, ಮೆಕ್ಸಿಕೊ ಸಿಟಿಯಿಂದ 600 ಕಿ.ಮೀ. ದೂರದಲ್ಲಿರುವ ಕುಲಿಯಕನ್ ನಗರದಲ್ಲಿ ಗಸ್ತು ನಡೆಸುತ್ತಿದ್ದ ‘ನ್ಯಾಶನಲ್ ಗಾರ್ಡ್’ ಸೇನಾ ಪೊಲೀಸರ ಮೇಲೆ ಮನೆಯೊಂದರಲ್ಲಿ ಆಕ್ರಮಣ ನಡೆಯಿತು ಎಂದು ಭದ್ರತಾ ಸಚಿವ ಆಲ್ಫೋನ್ಸೊ ಡುರಾರೊ ಹೇಳಿದರು.

ಮನೆಯನ್ನು ಪ್ರವೇಶಿಸಿದ ಭದ್ರತಾ ಸಿಬ್ಬಂದಿ, ಎಲ್ ಚಾಪೊನ ಮಗ ಒವಿಡಿಯೊ ಗಝ್ಮನ್ ಸೇರಿದಂತೆ ನಾಲ್ವರು ಮನೆಯಲ್ಲಿರುವುದನ್ನು ಪತ್ತೆಹಚ್ಚಿದರು ಹಾಗೂ ತಮ್ಮ ವಶಕ್ಕೆ ತೆಗೆದುಕೊಂಡರು. ಅಮೆರಿಕಕ್ಕೆ ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿದ ಆರೋಪ ಒವಿಡಿಯೊ ಗಝ್ಮನ್ ಮೇಲಿದೆ.

ಆದರೆ, ಅಲ್ಲಿಗೆ ತಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಬಂದೂಕುಧಾರಿಗಳು ಭದ್ರತಾ ಸಿಬ್ಬಂದಿಯನ್ನು ಹಿಮ್ಮೆಟ್ಟಿಸಿದರು. ಭದ್ರತಾ ಸಿಬ್ಬಂದಿಯ ಪ್ರಾಣ ರಕ್ಷಣೆಗಾಗಿ ಹಾಗೂ ನಗರದಲ್ಲಿ ಶಾಂತಿ ಕಾಪಾಡಿಕೊಳ್ಳುವುದಕ್ಕಾಗಿ ಭದ್ರತಾ ಸಿಬ್ಬಂದಿ ಅಲ್ಲಿಂದ ಹಿಂದೆ ಸರಿಯಬೇಕು ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ಸಚಿವರು ತಿಳಿಸಿದರು.

ಮೆಕ್ಸಿಕೊದ ಮಾದಕ ದ್ರವ್ಯ ಪಾತಕಿ ಎಲ್ ಚಾಪೊ ಅಮೆರಿಕದ ಬ್ರೂಕ್ಲಿನ್‌ನ ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News