ಉಗ್ರರಿಗೆ ಹಣಕಾಸು ಪೂರೈಕೆ ನಿಲ್ಲಿಸಲು ಪಾಕ್‌ಗೆ ಫೆಬ್ರವರಿವರೆಗೆ ಅವಕಾಶ

Update: 2019-10-18 17:41 GMT

ಪ್ಯಾರಿಸ್, ಅ. 18: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವವರ ವಿರುದ್ಧದ ಸಂಪೂರ್ಣ ಕ್ರಿಯಾ ಯೋಜನೆಯನ್ನು 2020ರ ಫೆಬ್ರವರಿ ಒಳಗೆ ಅನುಷ್ಠಾನಕ್ಕೆ ತರಲು ಪಾಕಿಸ್ತಾನ ವಿಫಲವಾದರೆ ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭಯೋತ್ಪಾದಕರಿಗೆ ಹಣಕಾಸು ಪೂರೈಸುವವರ ಮೇಲೆ ನಿಗಾ ಇಡುವ ಜಾಗತಿಕ ಸಂಸ್ಥೆ ಎಫ್‌ಎಟಿಎಫ್ ಶುಕ್ರವಾರ ಎಚ್ಚರಿಕೆ ನೀಡಿದೆ. ಅಲ್ಲಿಯವರೆಗೆ ಆ ದೇಶವು ‘‘ಬೂದು ಪಟ್ಟಿ’ಯಲ್ಲಿ ಮುಂದುವರಿಯುವುದು.

ಒಂದು ದೇಶವು ಎಫ್‌ಎಟಿಎಫ್‌ನ ಬೂದು ಪಟ್ಟಿಯಲ್ಲಿ ಇರುವುದೆಂದರೆ, ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅದಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಅರ್ಥ.

2020 ಫೆಬ್ರವರಿ ಬಳಿಕ, ಪಾಕಿಸ್ತಾನ ಎಫ್‌ಎಟಿಎಫ್‌ನ ಕಪ್ಪು ಪಟ್ಟಿಗೆ ಸೇರುವುದು ಬಹುತೇಕ ಖಚಿತ ಎಂದು ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಸಂಸ್ಥೆಯ ಐದು ದಿನಗಳ ಪೂರ್ಣಾಧಿವೇಶನದಲ್ಲಿ ಭಾಗವಹಿಸಿರುವ ಅಧಿಕಾರಿಗಳು ಹೇಳಿದ್ದಾರೆ.

ಪ್ಯಾರಿಸ್‌ನ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಪಾಕಿಸ್ತಾನ ಕುರಿತ ಅಂತಿಮ ನಿರ್ಧಾರವನ್ನು ಮುಂದಿನ ವರ್ಷದ ಫೆಬ್ರವರಿಯಲ್ಲಿ ತೆಗೆದುಕೊಳ್ಳಲಿದೆ.

 ಭಯೋತ್ಪಾದಕರಿಗೆ ಹಣಕಾಸು ಪೂರೈಕೆ ಸಂಬಂಧದ 27 ಅಂಶಗಳ ಪೈಕಿ ಕೇವಲ ಐದನ್ನು ನಿಭಾಯಿಸುವಲ್ಲಿ ಪಾಕಿಸ್ತಾನ ಸಮರ್ಥವಾಗಿದೆ ಎನ್ನುವುದನ್ನು ಎಫ್‌ಎಟಿಎಫ್ ಗಮನಿಸಿದೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.

27 ಅಂಶಗಳ ಕ್ರಿಯಾ ಯೋಜನೆಯಲ್ಲಿ ಪಾಕಿಸ್ತಾನದದ ಕಳಪೆ ನಿರ್ವಹಣೆಯನ್ನು ಗಮನದಲ್ಲಿರಿಸಿ ಅದನ್ನು ಬೂದು ಪಟ್ಟಿಯಲ್ಲೇ ಉಳಿಸಿಕೊಳ್ಳಲು ಒಮ್ಮತದಿಂದ ನಿರ್ಧರಿಸಲಾಯಿತು ಎಂದು ಎಫ್‌ಎಟಿಎಫ್ ಹೇಳಿದೆ.

ಉಗ್ರ ನಿಗ್ರಹ ಕ್ರಮಕ್ಕಾಗಿ ಪಾಕಿಸ್ತಾನಕ್ಕೆ ಪ್ರಬಲ ಒತ್ತಾಯ

‘‘2020 ಫೆಬ್ರವರಿ ಒಳಗೆ ಕ್ರಿಯಾ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸುವಂತೆ ನಾವು ಪಾಕಿಸ್ತಾನವನ್ನು ಬಲವಾಗಿ ಒತ್ತಾಯಿಸುತ್ತೇವೆ. ಇದರಲ್ಲಿ ಪಾಕಿಸ್ತಾನ ವಿಫಲವಾದರೆ ಪಾಕಿಸ್ತಾನದೊಂದಿಗಿನ ವ್ಯಾಪಾರ ಸಂಬಂಧಗಳು ಮತ್ತು ವ್ಯವಹಾರಗಳನ್ನು ಮರುಪರಿಶೀಲಿಸುವಂತೆ ಸದಸ್ಯ ದೇಶಗಳನ್ನು ಎಫ್‌ಎಟಿಎಫ್ ಒತ್ತಾಯಿಸಬೇಕಾಗುತ್ತದೆ’’ ಎಂದು ಎಫ್‌ಎಟಿಎಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಶುಕ್ರವಾರ ಎಫ್‌ಎಟಿಎಫ್ ಪೂರ್ಣಾಧಿವೇಶನದ ಕೊನೆಯ ದಿನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News