ಯುದ್ಧವಿರಾಮಕ್ಕೆ ಟರ್ಕಿ ಒಪ್ಪಿಗೆ

Update: 2019-10-18 17:43 GMT

ಅಂಕಾರ (ಟರ್ಕಿ), ಅ. 18: ಉತ್ತರ ಸಿರಿಯದಲ್ಲಿ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಐದು ದಿನಗಳ ಕಾಲ ನಿಲ್ಲಿಸಲು ಟರ್ಕಿ ಒಪ್ಪಿಕೊಂಡಿದೆ ಹಾಗೂ ಕುರ್ದ್ ನೇತೃತ್ವದ ಪಡೆಗಳು ಗಡಿಯುದ್ದಕ್ಕೂ ಇರುವ ಸುರಕ್ಷಿತ ವಲಯದಿಂದ ಹಿಂದೆ ಸರಿದರೆ ಅದು ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಟರ್ಕಿ ಅಧಿಕಾರಿಗಳು ಗುರುವಾರ ಘೋಷಿಸಿದರು.

 ಯುದ್ಧವಿರಾಮಕ್ಕೆ ಸಂಬಂಧಿಸಿ ಉಭಯ ಬಣಗಳ ನಡುವೆ ಅತ್ಯಂತ ಮಹತ್ವದ ಮಾತುಕತೆಗಳು ನಡೆದ ಬಳಿಕ ಈ ಘೋಷಣೆಯನ್ನು ಮಾಡಲಾಯಿತು. ಈ ಮಾತುಕತೆಗಾಗಿ ಪೆನ್ಸ್ ಟರ್ಕಿಗೆ ಆಗಮಿಸಿದ್ದಾರೆ.

ಈ ಯುದ್ಧವಿರಾಮದೊಂದಿಗೆ ಅಮೆರಿಕ ಮತ್ತು ಟರ್ಕಿ ನಡುವಿನ ಅಭೂತಪೂರ್ವ ಬಿಕ್ಕಟ್ಟು ಕೂಡ ನಿರಾಳಗೊಂಡಿದೆ.

ಯುದ್ಧವಿರಾಮ ಒಪ್ಪಂದದ ಪ್ರಕಾರ, ಕುರ್ದಿಶ್ ಪಡೆಗಳು ಗಡಿಯಿಂದ 32 ಕಿಲೋಮೀಟರ್ ಅಂತರದಿಂದ ಹಿಂದೆ ಸರಿಯಬೇಕು ಹಾಗೂ ಈ ಪ್ರದೇಶವು ‘ಸುರಕ್ಷಿತ ವಲಯ’ವಾಗುತ್ತದೆ.

ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಜೊತೆ ಪೆನ್ಸ್ ಗಂಟೆಗಳ ಕಾಲ ಮಾತುಕತೆ ನಡೆಸಿದರು.

ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್) ಸಂಪೂರ್ಣವಾಗಿ ಹಿಂದೆ ಸರಿದ ಬಳಿಕ ಟರ್ಕಿಯ ಸೇನಾ ಕಾರ್ಯಾಚರಣೆಯು ನಿಲ್ಲುತ್ತದೆ ಹಾಗೂ ಅದರ ಬಳಿಕ, ಅಮೆರಿಕವು ಟರ್ಕಿ ವಿರುದ್ಧ ಹೇರಿರುವ ದಿಗ್ಬಂಧನಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತದೆ ಎಂದು ಪೆನ್ಸ್ ಸುದ್ದಿಗಾರರಿಗೆ ತಿಳಿಸಿದರು. ಕುರ್ದ್ ಹೋರಾಟಗಾರರು ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್‌ನ ಮಹತ್ವದ ಭಾಗವಾಗಿದ್ದಾರೆ.

ಯುದ್ಧವಿರಾಮಕ್ಕೆ ಬದ್ಧವಾಗಲು ನನ್ನ ಪಡೆಗಳು ಸಿದ್ಧವಾಗಿವೆ ಎಂದು ಎಸ್‌ಡಿಎಫ್ ಮುಖ್ಯಸ್ಥ ಮಝ್ಲುಮ್ ಅಬ್ದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News