ಹೆಚ್ಚಿನ ಬಲದಿಂದ ಸಿರಿಯದಲ್ಲಿ ಸೇನಾ ಕಾರ್ಯಾಚರಣೆ ಪುನರಾರಂಭ: ಟರ್ಕಿ ಅಧ್ಯಕ್ಷ ಎಚ್ಚರಿಕೆ

Update: 2019-10-22 17:00 GMT

ಅಂಕಾರ (ಟರ್ಕಿ), ಅ. 22: ಅಮೆರಿಕ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟ ಯುದ್ಧವಿರಾಮ ಒಪ್ಪಂದದಂತೆ ಕುರ್ದಿಶ್ ಹೋರಾಟಗಾರರು ಸಂಪೂರ್ಣವಾಗಿ ವಾಪಸಾಗದಿದ್ದರೆ, ‘ಹೆಚ್ಚಿನ ಬಲ’ದಿಂದ ಸಿರಿಯದಲ್ಲಿ ಟರ್ಕಿ ಸೇನೆಯು ಕಾರ್ಯಾಚರಣೆಯನ್ನು ಮುಂದುವರಿಸುವುದು ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಮಂಗಳವಾರ ಎಚ್ಚರಿಸಿದ್ದಾರೆ.

‘‘ನಮ್ಮ ದೇಶಕ್ಕೆ ಅಮೆರಿಕ ನೀಡಿದ ಭರವಸೆಯು ಈಡೇರದಿದ್ದರೆ, ಎಲ್ಲಿ ನಿಲ್ಲಿಸಿದ್ದೇವೆಯೋ ಅಲ್ಲಿಂದ ಹೆಚ್ಚಿನ ದೃಢತೆಯಿಂದ ಸೇನಾ ಕಾರ್ಯಾಚರಣೆಯನ್ನು ನಾವು ಮುಂದುವರಿಸುತ್ತೇವೆ’’ ಎಂದು ಅವರು ಹೇಳಿದರು.

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಮಾತುಕತೆಗಾಗಿ ರಶ್ಯಕ್ಕೆ ತೆರಳುವ ಮುನ್ನ ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಯುದ್ಧವಿರಾಮಕ್ಕೆ ಸಂಬಂಧಿಸಿ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಜೊತೆ ಕಳೆದ ವಾರ ಒಪ್ಪಂದವೊಂದಕ್ಕೆ ಬಂದ ಬಳಿಕ, ಕಳೆದ ಗುರುವಾರದಿಂದ ಆರಂಭಿಸಿ 120 ಗಂಟೆಗಳ ಕಾಲ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಟರ್ಕಿ ಘೋಷಿಸಿದೆ. ಈ ಅವಧಿಯಲ್ಲಿ ಕುರ್ದಿಶ್ ಹೋರಾಟಗಾರರು ಟರ್ಕಿ ಗಡಿ ಸಮೀಪದ ಪ್ರದೇಶದಿಂದ ಹಿಂದೆ ಸರಿಯಬೇಕಾಗಿದೆ ಹಾಗೂ ಅಲ್ಲಿ ಸುರಕ್ಷಿತ ವಲಯವೊಂದು ಏರ್ಪಡಬೇಕಾಗಿದೆ.

ಯುದ್ಧವಿರಾಮವನ್ನು ವಿಸ್ತರಿಸುವಂತೆ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಕಳೆದ ವಾರ ನೀಡಿರುವ ಕರೆಯನ್ನೂ ಎರ್ದೊಗಾನ್ ತಿರಸ್ಕರಿಸಿದ್ದಾರೆ.

ಟರ್ಕಿ ಗಡಿಯುದ್ದಕ್ಕೂ ಹಲವು ಪ್ರದೇಶಗಳಲ್ಲಿ ಸಿರಿಯ ಸೈನಿಕರ ಉಪಸ್ಥಿತಿಯ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News