“ಶಿಸ್ತುಬದ್ಧ ಬ್ರೆಕ್ಸಿಟ್‌ಗಾಗಿ ‘ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ’ ಮಾಡಿದ್ದೇವೆ"
ಸ್ಟ್ರಾಸ್‌ಬೋರ್ಗ್ (ಫ್ರಾನ್ಸ್), ಅ. 22: ಶಿಸ್ತುಬದ್ಧ ಬ್ರೆಕ್ಸಿಟ್‌ಗಾಗಿ ‘ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ’ ನಾವು ಮಾಡಿದ್ದೇವೆ ಎಂದು ಯುರೋಪಿಯನ್ ಕಮಿಶನ್ ಅಧ್ಯಕ್ಷ ಜೀನ್ ಕ್ಲಾಡ್ ಜಂಕರ್ ಮಂಗಳವಾರ ಹೇಳಿದ್ದಾರೆ. ಆದರೆ, ನೂತನ ಬ್ರೆಕ್ಸಿಟ್ ಒಪ್ಪಂದಕ್ಕೆ ಅನುಮೋದನೆ ನೀಡುವ ಮುನ್ನ ಬ್ರಿಟಿಶ್ ಸಂಸತ್ತಿನ ಅನುಮೋದನೆಗಾಗಿ ನಾವು ಕಾಯುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ 31ರಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಹೋಗಲು (ಬ್ರೆಕ್ಸಿಟ್) ನಿರ್ಧರಿಸಿರುವ ಬಗ್ಗೆ ವಿಷಾದಿಸಿದ ಜಂಕರ್, ‘‘ಈ ವಿದಾಯ ಶಿಸ್ತುಬದ್ಧವಾಗಿರುವಂತೆ ನೋಡಿಕೊಳ್ಳಲು ನಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ ಎನ್ನುವ ತೃಪ್ತಿಯಾದರೂ ನಮಗಿದೆ’’ ಎಂದರು.
‘‘ಈಗ ನಾವು ವೆಸ್ಟ್‌ಮಿನ್‌ಸ್ಟರ್ (ಬ್ರಿಟಿಶ್ ಸಂಸತ್ತು)ನಲ್ಲಿ ನಡೆಯುವ ಘಟನಾವಳಿಗಳನ್ನು ನಿಕಟವಾಗಿ ಗಮನಿಸಬೇಕಾಗಿದೆ. ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತು ಅಂಗೀಕಾರ ನೀಡುವ ಮೊದಲು ಐರೋಪ್ಯ ಸಂಸತ್ತು ಅಂಗೀಕಾರ ನೀಡುವುದು ಸಾಧ್ಯವಿಲ್ಲ’’ ಎಂದು ಅವರು ನುಡಿದರು.