ಪಾಕ್ ಮಾಜಿ ಪ್ರಧಾನಿ ನವಾಝ್ ಶರೀಫ್‌ಗೆ ವಿಷಪ್ರಾಶನ: ಮಗ ಹುಸೈನ್ ನವಾಝ್ ಆರೋಪ

Update: 2019-10-23 17:06 GMT

ಲಾಹೋರ್, ಅ. 23: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಭ್ರಷ್ಟಾಚಾರ ನಿಗ್ರಹ ದಳದ ಸುಪರ್ದಿಯಲ್ಲಿರುವಾಗ ಅವರಿಗೆ ವಿಷಪ್ರಾಶನವಾಗಿರುವ ಸಾಧ್ಯತೆಯಿದ್ದು, ಅದರಿಂದಾಗಿಯೇ ಅವರ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದೆ ಎಂದು ಅವರ ಮಗ ಹುಸೈನ್ ನವಾಝ್ ಮಂಗಳವಾರ ಆರೋಪಿಸಿದ್ದಾರೆ.

ಪಾಕಿಸ್ತಾನದ ಮೂರು ಬಾರಿಯ ಪ್ರಧಾನಿ ಹಾಗೂ ಪಿಎಂಎಲ್-ಎನ್ ಪಕ್ಷದ ಅತ್ಯುನ್ನತ ನಾಯಕ ಶರೀಫ್‌ರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ ಬಳಿಕ, ಅವರನ್ನು ಸೋಮವಾರ ರಾತ್ರಿ ಲಾಹೋರ್‌ನಲ್ಲಿನ ಸರ್ವಿಸಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಲ್-ಅಝೀಝಾ ಸ್ಟೀಲ್ ಮಿಲ್ಸ್ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವೊಂದು 69 ವರ್ಷದ ನವಾಝ್ ಶರೀಫ್‌ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅವರು 2018 ಡಿಸೆಂಬರ್ 24ರಿಂದ ಲಾಹೋರ್‌ನ ಕೋಟ್ ಲಾಖ್‌ಪತ್ ಜೈಲಿನಲ್ಲಿದ್ದಾರೆ.

‘‘ನನ್ನ ತಂದೆಯವರನ್ನು ಆಸ್ಪತ್ರೆಗೆ ಸೇರಿಸಿದಾಗ ಅವರ ಪ್ಲೇಟ್‌ಲೆಟ್ಸ್ ಸಂಖ್ಯೆ ಅತ್ಯಂತ ಕಡಿಮೆಯಾಗಿತ್ತು. ಅವರಿಗೆ ವಿಷ ಕೊಟ್ಟಿರುವ ಸಾಧ್ಯತೆಯಿದೆ’’ ಎಂದು ಹುಸೈನ್ ನವಾಝ್ ಲಂಡನ್‌ನಿಂದ ಟ್ವೀಟ್ ಮಾಡಿದ್ದಾರೆ.

‘‘ಇತ್ತೀಚಿನ ವೈದ್ಯಕೀಯ ವರದಿಗಳ ಪ್ರಕಾರ, ನನ್ನ ತಂದೆಯ ಪ್ಲೇಟ್‌ಲೆಟ್‌ಗಳ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಕಡಿಮೆಯಿದ್ದರೂ (16,000) ಅವರನ್ನು ಯಾಕೆ ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಲಿಲ್ಲ ಎನ್ನುವುದಕ್ಕೆ ಇಮ್ರಾನ್ ಖಾನ್ ಸರಕಾರ ಉತ್ತರ ಕೊಡಬೇಕು’’ ಎಂದು ಅವರು ಆಗ್ರಹಿಸಿದರು.

‘‘ಅತ್ಯಂತ ಕಡಿಮೆ ಪ್ರಮಾಣದ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೊಂದಿರುವ ಸ್ಥಿತಿಯೇ ಅತ್ಯಂತ ಗಂಭೀರ ಮತ್ತು ಪ್ರಾಣಕ್ಕೆ ಬೆದರಿಕೆಯಾಗಿರುವಾಗ, ನನ್ನ ತಂದೆಯನ್ನು ಯಾಕೆ ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಲಿಲ್ಲ? ಸರಕಾರ ಇದಕ್ಕೆ ವಿವರಣೆ ನೀಡುವುದೇ?’’ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News