ವಿದ್ಯಾರ್ಥಿನಿಯನ್ನು ಜೀವಂತ ದಹಿಸಿದ ಪ್ರಕರಣ: 16 ಮಂದಿಗೆ ಮರಣದಂಡನೆ

Update: 2019-10-24 16:09 GMT

ಫೆನಿ (ಬಾಂಗ್ಲಾದೇಶ), ಅ. 24: ಬಾಂಗ್ಲಾದೇಶದಲ್ಲಿ 19 ವರ್ಷದ ವಿದ್ಯಾರ್ಥಿನಿಯೊಬ್ಬರನ್ನು ಜೀವಂತ ಸುಟ್ಟು ಹಾಕಿದ ಪ್ರಕರಣದಲ್ಲಿ, ದೇಶದ ನ್ಯಾಯಾಲಯವೊಂದು ಗುರುವಾರ 16 ಮಂದಿಗೆ ಮರಣ ದಂಡನೆ ವಿಧಿಸಿದೆ.

ವಿದ್ಯಾರ್ಥಿನಿ ನುಸ್ರತ್ ಜಹಾನ್ ರಫಿ ಹೋಗುತ್ತಿದ್ದ ಧಾರ್ಮಿಕ ಶಾಲೆಯೊಂದರ ಮುಖ್ಯ ಶಿಕ್ಷಕನ ವಿರುದ್ಧ ಸಲ್ಲಿಸಿದ ಲೈಂಗಿಕ ಪೀಡನೆ ದೂರನ್ನು ಹಿಂದಕ್ಕೆ ಪಡೆಯಲು ಆಕೆ ನಿರಾಕರಿಸಿದ ಬಳಿಕ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಗಿತ್ತು. ಈ ಘಟನೆಯು ದೇಶಾದ್ಯಂತ ಭಾರೀ ಆಕ್ರೋಶದ ಅಲೆಯನ್ನು ಎಬ್ಬಿಸಿತ್ತು.

ವಿದ್ಯಾರ್ಥಿನಿಯನ್ನು ಧಾರ್ಮಿಕ ಶಾಲೆಯ ಮೇಲ್ಭಾಗಕ್ಕೆ ಕರೆದುಕೊಂಡು ಹೋಗಿ, ಪೊಲೀಸರಿಗೆ ನೀಡಿರುವ ದೂರನ್ನು ಹಿಂದಕ್ಕೆ ಪಡೆಯುವಂತೆ ಆರೋಪಿಗಳು ಒತ್ತಡ ಹೇರಿದ್ದರು. ಅದಕ್ಕೆ ಆಕೆ ಒಪ್ಪದಿದ್ದಾಗ, ದುಷ್ಕರ್ಮಿಗಳು ಅವರನ್ನು ಕಟ್ಟಿ ಹಾಕಿ ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.

80 ಶೇಕಡ ಸುಟ್ಟ ಗಾಯಗಳಿಗೆ ಒಳಗಾದ ವಿದ್ಯಾರ್ಥಿನಿ ಐದು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ವಿದ್ಯಾರ್ಥಿನಿಯ ಹತ್ಯೆಯನ್ನು ಆತ್ಮಹತ್ಯೆ ಎಂದು ಬಿಂಬಿಸುವುದು ಹಂತಕರ ಉದ್ದೇಶವಾಗಿತ್ತು. ಆದರೆ, ಅವರ ಕೈ-ಕಾಲುಗಳನ್ನು ಕಟ್ಟಲು ಬಳಸಲಾಗಿದ್ದ ಶಾಲು ಸುಟ್ಟು ಹೋಗಿದ್ದರಿಂದ ವಿದ್ಯಾರ್ಥಿನಿ ಅಲ್ಲಿಂದ ತಪ್ಪಿಸಿಕೊಂಡು ಕಟ್ಟಡದ ಹೊರಗೆ ಬರುವಲ್ಲಿ ಯಶಸ್ವಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News