ಪೋಲಿಯೊದ ಎರಡು ನಮೂನೆಗಳ ನಿರ್ಮೂಲನ ಘೋಷಣೆಗೆ ವಿಶ್ವ ಆರೋಗ್ಯ ಸಂಸ್ಥೆ ಕ್ಷಣಗಣನೆ

Update: 2019-10-24 16:51 GMT

ಲಂಡನ್, ಅ. 24: ಮುಖ್ಯವಾಗಿ ಕಾಲಿನ ಬೆಳವಣಿಗೆಯನ್ನು ನಿಲ್ಲಿಸುವ ಪೋಲಿಯೊ ರೋಗದ ವಿರುದ್ಧದ ದಶಕಗಳ ಅವಧಿಯ ಹೋರಾಟದಲ್ಲಿ ಮಾನವ ಕುಲಕ್ಕೆ ಆಂಶಿಕ ವಿಜಯ ದೊರೆತಿದೆ. ಅಂಗವೈಕಲ್ಯ ಉಂಟು ಮಾಡುವ ವೈರಸ್‌ನ ಮೂರು ನಮೂನೆಗಳ ಪೈಕಿ ಎರಡು ನಮೂನೆಗಳನ್ನು ನಿರ್ಮೂಲಗೊಳಿಸಲಾಗಿದೆ ಎಂಬುದಾಗಿ ಭಾವಿಸಲಾಗಿದೆ.

ಮೂರನೇ ನಮೂನೆಯ ವೈಲ್ಡ್ ಪೋಲಿಯೊವೈರಸ್ (ಡಬ್ಲುಪಿವಿ3) ನಿರ್ಮೂಲಗೊಂಡಿದೆ ಎನ್ನುವುದನ್ನು ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಅಧಿಕಾರಿಗಳು ಸಜ್ಜಾಗಿದ್ದಾರೆ.

ಈಗಾಗಲೇ 2015ರಲ್ಲಿ, ಎರಡನೇ ನಮೂನೆಯ ವೈಲ್ಡ್ ಪೋಲಿಯೊ ವೈರಸ್ (ಡಬ್ಲುಪಿವಿ2) ನಿರ್ಮೂಲಗೊಂಡಿದೆ ಎಂಬುದಾಗಿ ಘೋಷಿಸಲಾಗಿದೆ. ಅದೂ ಅಲ್ಲದೆ, ಸಿಡುಬು ರೋಗವನ್ನು ನಿರ್ಮೂಲಗೊಳಿಸಲಾಗಿದೆ ಎಂಬುದಾಗಿ 1980ರಲ್ಲೇ ಘೋಷಿಸಲಾಗಿತ್ತು.

   ರೋಗ ನಿರೋಧತೆ ಇರದ ಮತ್ತು ಸ್ವಚ್ಛತೆ ಕಡಿಮೆ ಇರುವ ಪ್ರದೇಶಗಳಲ್ಲಿ ವಾಸಿಸುವ ವಂಚಿತ ಸಮುದಾಯದ ಜನರನ್ನು ಪೋಲಿಯೊ ಹೆಚ್ಚಾಗಿ ಕಾಡುತ್ತದೆ. ನರ ವ್ಯವಸ್ಥೆಯನ್ನು ಪ್ರವೇಶಿಸುವ ರೋಗಾಣುಗಳು ಗಂಟೆಗಳಲ್ಲೇ ಸರಿಪಡಿಸಲಾಗದ ಹಾನಿಯನ್ನು ಮಾಡುತ್ತವೆ.

ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ, ಆದರೆ ಲಸಿಕೆ ಹಾಕುವ ಮೂಲಕ ಬರದಂತೆ ತಡೆಗಟ್ಟಬಹುದಾಗಿದೆ.

ಪೋಲಿಯೊ ಮೂರನೇ ನಮೂನೆಯ ಪ್ರಕರಣ 2012ರಲ್ಲಿ ನೈಜೀರಿಯದಲ್ಲಿ ಪತ್ತೆಯಾಗಿತ್ತು. ಅಂದಿನಿಂದ ಅದನ್ನು ನಿರ್ಮೂಲಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಆರೋಗ್ಯ ಅಧಿಕಾರಿಗಳು ರೋಗದ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News