ಟ್ರಕ್ ನಲ್ಲಿ ಪತ್ತೆಯಾದ 39 ಮೃತದೇಹಗಳು ಯಾರದ್ದು ಗೊತ್ತಾ ?

Update: 2019-10-24 17:01 GMT

ಲಂಡನ್, ಅ. 24: ಲಂಡನ್ ಸಮೀಪ ಟ್ರಕ್ಕೊಂದರ ಕಂಟೇನರ್‌ನಲ್ಲಿ ಬುಧವಾರ ಪತ್ತೆಯಾದ ಎಲ್ಲ 39 ಮೃತದೇಹಗಳು ಚೀನಾ ರಾಷ್ಟ್ರೀಯರೆದ್ದೆಂದು ನಂಬಲಾಗಿದೆ ಎಂದು ಬ್ರಿಟಿಷ್ ಪೊಲೀಸರು ಗುರುವಾರ ಹೇಳಿದ್ದಾರೆ. ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಲ್ಲೇ ಬೃಹತ್ ಕೊಲೆ ತನಿಖೆಯನ್ನು ಬ್ರಿಟಿಷ್ ಪೊಲೀಸರು ಕೈಗೆತ್ತಿಕೊಂಡಿದ್ದಾರೆ.

ಪೂರ್ವ ಲಂಡನ್‌ನ ಕೈಗಾರಿಕಾ ಪ್ರಾಂಗಣವೊಂದರಲ್ಲಿ ನಿಲ್ಲಿಸಿದ್ದ ಟ್ರಕ್‌ನ ಶೀತಲೀಕೃತ ಕಂಟೇನರ್‌ನ ಒಳಗೆ ಇರುವ ಶವಗಳನ್ನು ಬುಧವಾರ ಮುಂಜಾನೆ ತುರ್ತು ಪರಿಸ್ಥಿತಿ ನಿಭಾಯಿಸುವ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಆ ಟ್ರಕ್ ಅದಕ್ಕಿಂತ ಸ್ವಲ್ಪವೇ ಮೊದಲು ಬೆಲ್ಜಿಯಮ್‌ನಿಂದ ತೆಪ್ಪವೊಂದರಲ್ಲಿ ಬಂದಿತ್ತು.

ಈ ಘಟನೆಯು ಬ್ರಿಟನ್‌ನಲ್ಲಿ ಆಘಾತ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಇದು ‘ಊಹಿಸಲು ಸಾಧ್ಯವಾಗದ ದುರಂತ’ ಎಂಬುದಾಗಿ ಪ್ರಧಾನಿ ಬೊರಿಸ್ ಜಾನ್ಸನ್ ಬಣ್ಣಿಸಿದ್ದಾರೆ.

ಮೃತರ ಪೈಕಿ ಎಂಟು ಮಂದಿ ಮಹಿಳೆಯರು ಹಾಗೂ 31 ಮಂದಿ ಪುರುಷರು ಎಂದು ಸ್ಥಳೀಯ ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ‘‘ಅವರೆಲ್ಲರೂ ಚೀನಿ ರಾಷ್ಟ್ರೀಯರೆಂದು ನಂಬಲಾಗಿದೆ’’ ಎಂದು ಎಸೆಕ್ಸ್ ಪೊಲೀಸರು ತಿಳಿಸಿದರು. ಘಟನೆಯ ಬಗ್ಗೆ ಪರಿಶೀಲನೆ ಚೀನಿ ರಾಯಭಾರ ಕಚೇರಿಯ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ ಎಂದು ಚೀನಾದ ವಿದೇಶ ಸಚಿವಾಲಯ ಹೇಳಿದೆ. 25 ವರ್ಷದ ಟ್ರಕ್ ಚಾಲಕನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಅಕ್ರಮ ಮಾನವ ಸಾಗಾಟ ದಂಧೆ?

ಇದು ಜನರನ್ನು ಅಕ್ರಮವಾಗಿ ಬ್ರಿಟನ್‌ಗೆ ಸಾಗಿಸುವ ಜಾಲವಾಗಿರಬಹುದು ಹಾಗೂ ಅಸುರಕ್ಷಿತ ಸಾಗಾಟದ ವೇಳೆ ಈ 39 ಮಂದಿ ಪ್ರಾಣ ಕಳೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸದ್ದಾರೆ.

ಬೆಲ್ಜಿಯಮ್‌ನಿಂದ ತೆಪ್ಪದಲ್ಲಿ ಬಂದ ಕಂಟೇನರ್

ಮೃತದೇಹಗಳನ್ನು ಒಳಗೊಂಡ ಕಂಟೇನರ್ ಬೆಲ್ಜಿಯಮ್‌ನ ಝೀಬ್ರಗ್ ಬಂದರಿನಿಂದ ಥೇಮ್ಸ್ ನದಿಯ ಅಳಿವೆಯಲ್ಲಿರುವ ಪರ್ಫ್ಲೀಟ್‌ಗೆ ತೆಪ್ಪವೊಂದರಲ್ಲಿ ಬಂದಿತ್ತು. ಇದು 9ರಿಂದ 12 ಗಂಟೆಗಳ ಯಾನವಾಗಿದೆ.

ತೆಪ್ಪವು ಪರ್ಫ್ಲೀಟ್‌ಗೆ ಬುಧವಾರ ರಾತ್ರಿ ಸುಮಾರು 12:30ಕ್ಕೆ ಬಂದಿತ್ತು. ಬಳಿಕ ಕಂಟೇನರನ್ನು ಹೊತ್ತ ಟ್ರಕ್ ಅರ್ಧ ಗಂಟೆ ಬಳಿಕ ಅಲ್ಲಿಂದ ತೆರಳಿತ್ತು. ತುರ್ತು ಸೇವೆಯ ಸಿಬ್ಬಂದಿಯನ್ನು ಮುಂಜಾನೆ 1:40ರ ಸುಮಾರಿಗೆ ಸ್ಥಳಕ್ಕೆ ಕರೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News