ದೇವಧರ್ ಟ್ರೋಫಿ: ಭಾರತ ‘ಬಿ’ ತಂಡಕ್ಕೆ ಗೆಲುವು

Update: 2019-10-31 17:57 GMT

ರಾಂಚಿ, ಅ.31: ಋತುರಾಜ್ ಗಾಯಕ್ವಾಡ್ ಹಾಗೂ ಬಾಬಾ ಅಪರಾಜಿತ್ ಶತಕಗಳ ಕೊಡುಗೆ ಸಹಾಯದಿಂದ ಭಾರತ ‘ಬಿ’ ತಂಡ ಭಾರತ ‘ಎ’ ತಂಡವನ್ನು 108 ರನ್‌ಗಳ ಅಂತರದಿಂದ ಸದೆಬಡಿದು ದೇವಧರ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಗುರುವಾರ ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ‘ಬಿ ’ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 302 ರನ್ ಗಳಿಸಿತು. ಆರಂಭಿಕ ಆಟಗಾರ ಗಾಯಕ್ವಾಡ್(113 ರನ್, 122 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ಅಪರಾಜಿತ್(101 ರನ್,101 ಎಸೆತ, 6 ಬೌಂಡರಿ, 2 ಸಿಕ್ಸರ್)ಭಾರತ ಬಿ ತಂಡದ ಬ್ಯಾಟಿಂಗ್‌ಗೆ ಬಲ ನೀಡಿದರು.

ಗೆಲ್ಲಲು ಕಠಿಣ ಗುರಿ ಪಡೆದ ಭಾರತ ‘ಎ ’ ತಂಡ ರೂಶ್ ಕಲಾರಿಯಾ(3-20) ಹಾಗೂ ಮುಹಮ್ಮದ್ ಸಿರಾಜ್(2-30)ದಾಳಿಗೆ ತತ್ತರಿಸಿ 47.2 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟಾಯಿತು.

ಭಾರತ ‘ಎ’ತಂಡದ ಪರ ನಾಯಕ ಹನುಮ ವಿಹಾರಿ ಸರ್ವಾಧಿಕ ಸ್ಕೋರ್(59, 82 ಎಸೆತ, 6 ಬೌಂಡರಿ)ಗಳಿಸಿದರು.ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಭಾರತ ‘ಬಿ’ ತಂಡ ಪ್ರಿಯಾಂಕ್ ಪಾಂಚಾಲ್(3) ಹಾಗೂ ಯಶಸ್ವಿ ಜೈಸ್ವಾಲ್(31)ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಜಯದೇವ್ ಉನದ್ಕಟ್(2-47) ಹಾಗೂ ಸಿದ್ದಾರ್ಥ್ ಕೌಲ್(1-77)ದಾಳಿಗೆ ಸಿಲುಕಿದ ಭಾರತ ‘ಬಿ’ 14.1 ಓವರ್‌ಗಳಲ್ಲಿ 63 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು.

ಮೂರನೇ ವಿಕೆಟ್ ಜೊತೆಯಾಟದಲ್ಲಿ 158 ರನ್ ಸೇರಿಸಿದ ಗಾಯಕ್ವಾಡ್ ಹಾಗೂ ಅಪರಾಜಿತ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್, 42ನೇ ಓವರ್‌ನಲ್ಲಿ ಶತಕವೀರ ಗಾಯಕ್ವಾಡ್ ವಿಕೆಟ್ ಕಬಳಿಸಿ ಈ ಜೋಡಿಯನ್ನು ಬೇರ್ಪಡಿಸಿದರು. ಕೇದಾರ್ ಜಾಧವ್(5)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ವಿಜಯ ಶಂಕರ್(26)ಉನದ್ಕಟ್ ಬೌಲಿಂಗ್‌ನಲ್ಲಿ ರಿಟರ್ನ್ ಕ್ಯಾಚ್ ನೀಡಿದರು.

ಗೆಲ್ಲಲು 303 ರನ್ ಗುರಿ ಪಡೆದಿದ್ದ ಭಾರತ ‘ಎ’ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಗಿದ್ದಲ್ಲದೆ, ನಿರಂತರವಾಗಿ ವಿಕೆಟ್‌ಗಳನ್ನು ಕೈಚೆಲ್ಲಿತು.

ವಿಜಯ ಹಝಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದಲ್ಲಿ ಮಿಂಚಿದ್ದ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್(10)ಇನಿಂಗ್ಸ್ ನ 9ನೇ ಓವರ್‌ನಲ್ಲಿ ಕಲಾರಿಯಾಗೆ ವಿಕೆಟ್ ಒಪ್ಪಿಸಿ ನಿರಾಸೆಗೊಳಿಸಿದರು. ಇನ್ನೊರ್ವ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್(20)ಮುಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡಾದರು. ಆಗ ಭಾರತ ಎ ತಂಡದ ಸ್ಕೋರ್ 2 ವಿಕೆಟ್‌ಗೆ 42. ವಿಷ್ಣು ವಿನೋದ್(11), ಸಿರಾಜ್‌ಗೆ ಎರಡನೇ ಬಲಿಯಾದರು.

ತಂಡವನ್ನು ಆಧರಿಸಲು ಯತ್ನಿಸಿದ ವಿಹಾರಿ ಹಾಗೂ ಅಮನ್‌ದೀಪ್ ಖಾರೆ(25)ಸ್ಕೋರನ್ನು 100ರ ಗಡಿ ದಾಟಿಸಿದರು. 39ನೇ ಓವರ್‌ನಲ್ಲಿ ಭಾರತ ‘ಎ’ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ವಿಹಾರಿ ಔಟಾದ ಬಳಿಕ ಭಾರತ ‘ಎ’ ತಂಡದ ಮರು ಹೋರಾಟದ ವಿಶ್ವಾಸಕ್ಕೆ ಹಿನ್ನಡೆಯಾಯಿತು. ಭಾರತ ‘ಎ’ ತಂಡ ಶುಕ್ರವಾರ ನಡೆಯಲಿರುವ 2ನೇ ಪಂದ್ಯದಲಿ ಭಾರತ ‘ಸಿ’ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News