ಭಾರತ ‘ಬಿ’ ದೇವಧರ್ ಟ್ರೋಫಿ ಚಾಂಪಿಯನ್

Update: 2019-11-04 16:23 GMT

ರಾಂಚಿ, ನ.4: ಕೇದಾರ್ ಜಾಧವ್(86) ಮತ್ತು ಶಾಬಾಝ್ ನದೀಂ(32ಕ್ಕೆ4) ಅತ್ಯುತ್ತಮ ಪ್ರದರ್ಶನದ ನೆರವಿನಲ್ಲಿ ಭಾರತ ‘ಬಿ’ ತಂಡ ಇಲ್ಲಿ ನಡೆದ ದೇವಧರ್ ಟ್ರೋಫಿ ಫೈನಲ್‌ನಲ್ಲಿ ಇಂದು ಭಾರತ ‘ಸಿ’ ತಂಡವನ್ನು ಮಣಿಸುವ ಮೂಲಕ ಟ್ರೋಫಿಯನ್ನು ಎತ್ತಿದೆ.

 ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆದ 47ನೇ ಆವೃತ್ತಿಯ ಪ್ರತಿಷ್ಠಿತ ದೇವಧರ್ ಟ್ರೋಫಿ ಫೈನಲ್‌ನಲ್ಲಿ ಗೆಲುವಿಗೆ 284 ರನ್ ಗಳಿಸಬೇಕಿದ್ದ ಭಾರತ ‘ಸಿ’ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 232 ರನ್ ಗಳಿಸಲಷ್ಟೇ ಶಕ್ತವಾಗಿದೆ.

ತಂಡದ ಪ್ರೀಯಮ್ ಗಾಗ್(74) ಏಕಾಂಗಿ ಹೋರಾಟ ಫಲ ನೀಡಲಿಲ್ಲ. ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಱಬಿೞತಂಡ ಆರಂಭಿಕ ಆಘಾತ ಅನುಭವಿಸಿದ್ದರೂ ಜಾಧವ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್, ಯಶಸ್ವಿ ಜೈಸ್ವಾಲ್ ಅರ್ಧಶತಕ(54), ಕೊನೆಯ ಕ್ರಮಾಂಕದಲ್ಲಿ ವಿಜಯ್ ಶಂಕರ್ 33 ಎಸೆತಗಳಲ್ಲಿ 45 ರನ್ ಸೇರಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. 28ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ಬಿ ತಂಡಕ್ಕೆ ಮೂರನೇ ವಿಕೆಟ್‌ಗೆ ಬಾಬಾ ಅಪರಾಜಿತ್ ಮತ್ತು ಯಶಸ್ವಿ ಜೈಸ್ವಾಲ್ 45 ರನ್‌ಗಳ ಜೊತೆಯಾಟ ನೀಡಿದರು. ಜೈಸ್ವಾಲ್ ಅರ್ಧಶತಕ ದಾಖಲಿಸಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. 92ಕ್ಕೆ 4 ವಿಕೆಟ್ ಕಳೆದುಕೊಂಡ ಭಾರತ ಬಿ ತಂಡವನ್ನು ಜಾಧವ್ ಆಧರಿಸಿದರು. ಅವರು 94 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ ಅಮೂಲ್ಯ 86 ರನ್ ಸೇರಿಸಿದರು.

ನಿತೀಶ್ ರಾಣಾ (20), ವಿಜಯ್ ಶಂಕರ್(45) ಮತ್ತು ಕೃಷ್ಣಪ್ಪ ಗೌತಮ್(35) ಉತ್ತಮ ಕೊಡುಗೆ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಬಿ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 283 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ಸಿ ತಂಡ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶುಬ್‌ಮನ್ ಗಿಲ್(1) ಮತ್ತು ಮಾಯಾಂಕ್ ಅಗರ್ವಾಲ್(28) ಅವರನ್ನು ಬೇಗನೆ ಕಳೆದುಕೊಂಡಿತು. ಪ್ರೀಯಮ್ ಗಾರ್ಗ್ ಅರ್ಧಶತಕ ದಾಖಲಿಸಿ ಹೋರಾಟ ನಡೆಸಿದರು. ವಿರಾಟ್ ಸಿಂಗ್(6), ಸೂರ್ಯಕುಮಾರ್ ಯಾದವ್(3) ಮತ್ತು ದಿನೇಶ್ ಕಾರ್ತಿಕ್(3) ಕಳಪೆ ಪ್ರದರ್ಶನ ನೀಡಿರುವುದು ಸಿ ತಂಡಕ್ಕೆ ಹೊಡೆತ ನೀಡಿತು. 30ನೇ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಸಿರಾಜ್ ಅವರು ಗಾರ್ಗ್ ಗೆ ಪೆವಿಲಿಯನ್ ಹಾದಿ ತೋರಿಸಿದರು. ಬಳಿಕ ಸಿ ತಂಡ ಚೇತರಿಸಿಕೊಳ್ಳಲಿಲ್ಲ. ಅಕ್ಷರ್ ಪಟೇಲ್(38), ಜಲಜ್ ಸಕ್ಸೇನಾ (ಔಟಾಗದೆ 37) ಮತ್ತು ಮಾಯಾಂಕ್ ಮಾರ್ಕಂಡೆ(27) ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ. ಕೆಳಕ್ರಮಾಂಕದಲ್ಲಿ ಉತ್ತಮ ಜೊತೆಯಾಟದ ಕೊರತೆ ತಂಡವನ್ನು ಸೋಲಿನ ದವಡೆಗೆ ದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News