ರವಿವಾರ ಭಾರತ-ಬಾಂಗ್ಲಾದೇಶ 3ನೇ ಟ್ವೆಂಟಿ-20

Update: 2019-11-09 14:09 GMT

ನಾಗ್ಪುರ, ನ.9: ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯ ನಾಗ್ಪುರದಲ್ಲಿ ರವಿವಾರ ನಡೆಯಲಿದ್ದು, ಉಭಯ ತಂಡಗಳಿಗೂ ಸರಣಿ ಗೆಲುವಿಗೆ ಮಹತ್ವದ ಪಂದ್ಯವಾಗಿದೆ.

ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಎರಡನೇ ಪಂದ್ಯದಲ್ಲಿ ಭಾರತ ಜಯ ಗಳಿಸಿ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಅಂತಿಮ ಪಂದ್ಯದಲ್ಲಿ ಗೆಲುವಿಗೆ ಎರಡೂ ತಂಡಗಳು ಪ್ರಯತ್ನ ನಡೆಸಲಿವೆ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾ ಆಘಾತ ನೀಡಿತ್ತು. ಇದಕ್ಕೆ ಎರಡನೇ ಪಂದ್ಯದಲ್ಲಿ ಭಾರತ ಗೆಲುವಿನೊಂದಿಗೆ ಪ್ರವಾಸಿ ತಂಡಕ್ಕೆ ತಿರುಗೇಟು ನೀಡಿದೆ.

ನಾಯಕ ವಿರಾಟ್ ಕೊಹ್ಲಿ ಮತ್ತು ಕೆಲವು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಭಾರತದ ಯುವ ಆಟಗಾರರು ಸರಣಿಗೆ ಗೆಲುವಿಗೆ ಪ್ರಯತ್ನ ನಡೆಸಲಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ಗೆ ಸಮರ್ಥ ತಂಡ ಕಟ್ಟಲು ಯುವ ಆಟಗಾರರ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಪರ ಯುವ ಆಟಗಾರರ ದೊಡ್ಡ ಸಾಧನೆ ಕಂಡು ಬರಲಿಲ್ಲ. ಯಜುವೇಂದ್ರ ಚಹಾಲ್ ಮಾತ್ರ ಮಿಂಚಿದ್ದಾರೆ.

ರಾಜ್‌ಕೋಟ್‌ನಲ್ಲಿ ಬಾಂಗ್ಲಾದೇಶ ತಂಡವನ್ನು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 153 ರನ್‌ಗಳಿಗೆ ನಿಯಂತ್ರಿಸಿತ್ತು. ನಾಯಕ ರೋಹಿತ್ ಶರ್ಮಾ ಆಕರ್ಷಕ 85 ರನ್ ಗಳಿಸಿ ತಂಡದ ಗೆಲುವಿಗೆ ನೆರವಾಗಿದ್ದರು. ಬೌಲರ್ ವಾಷಿಂಗ್ಟನ್ ಸುಂದರ್ ಅವರು ಕುಲ್‌ದೀಪ್ ಯಾದವ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರೂ ಅವರಿಂದ ಗಮನಾರ್ಹ ಪ್ರದರ್ಶನ ಕಂಡು ಬರಲಿಲ್ಲ. ವೇಗಿ ಖಲೀಲ್ ಅಹ್ಮದ್ ಎದುರಾಳಿ ತಂಡಕ್ಕೆ ದುಬಾರಿ ರನ್ ಬಿಟ್ಟುಕೊಟ್ಟಿದ್ದಾರೆ. ಈ ಕಾರಣದಿಂದಾಗಿ ಅಂತಿಮ ಪಂದ್ಯದಲ್ಲಿ ದೀಪಕ್ ಚಹಾರ್ ಅವರೊಂದಿಗೆ ಶಾರ್ದೂಲ್ ಠಾಕೂರ್ ದಾಳಿಗಿಳಿಯುವ ಸಾಧ್ಯತೆ ಇದೆ.

ಕೃನಾಲ್ ಪಾಂಡ್ಯ ತಂಡದಲ್ಲಿ ಖಾಯ ಸ್ಥಾನ ಪಡೆದಿದ್ದರೂ ಸರಣಿಯಲ್ಲಿ ಅವರ ಪ್ರದರ್ಶನ ಚೆನ್ನಾಗಿಲ್ಲ. ಬ್ಯಾಟಿಂಗ್‌ನಲ್ಲೂ ಮಿಂಚಲಿಲ್ಲ. ದಿಲ್ಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಡಿದ ತಂಡದ ಆಟಗಾರರನ್ನೇ ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಟ್ವೆಂಟಿ-20 ಪಂದ್ಯಕ್ಕೆ ಕಣಕ್ಕಿಳಿಸಲಾಗಿತ್ತು. ಇದರಿಂದಾಗಿ ಮನೀಷ್ ಪಾಂಡೆ, ಸಂಜು ಸ್ಯಾಮ್ಸನ್ ಮತ್ತು ರಾಹುಲ್ ಚಹಾರ್ ಅವಕಾಶಕ್ಕಾಗಿ ಎದುರು ನೋಡುವಂತಾಗಿದೆ . ಹಿರಿಯ ಆಟಗಾರರು ತಂಡಕ್ಕೆ ಮರಳಿದರೆ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಶ್ರೇಯಸ್ ಅಯ್ಯರ್ ಬೇಗನೇ ತಂಡದಲ್ಲಿ ಸ್ಥಾನ ಕಂಡು ಕೊಂಡಿದ್ದಾರೆ. ಲೋಕೇಶ್ ರಾಹುಲ್ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಆಲ್‌ರೌಂಡರ್ ಶಿವಮ್ ದುಬೆ ಸಿಕ್ಕಿರುವ ಅವಕಾಶವನ್ನು ಬಾಚಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಶಿಖರ್ ಧವನ್ ಅವರಿಂದ ಸ್ಫೋಟಕ ಬ್ಯಾಟಿಂಗ್ ಕಣ್ಮರೆಯಾಗಿದೆ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರಿಂದಲೂ ತಂಡದಲ್ಲಿ ಸ್ಥಾನ ಭದ್ರಪಡಿಸುವ ನಿಟ್ಟಿನಲ್ಲಿ ಆಟ ಕಂಡು ಬಂದಿಲ್ಲ. ಅಂತಿಮ ಪಂದ್ಯದಲ್ಲಿ ಇವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.

ದಿಲ್ಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತಕ್ಕೆ ಆಘಾತಕಾರಿ ಸೋಲುಣಿಸಿದ್ದ ಬಾಂಗ್ಲಾದೇಶ ತಂಡ ಅಂತಿಮ ಪಂದ್ಯದಲ್ಲಿ ನೀಡಲಿರುವ ಪ್ರದರ್ಶನದ ಬಗ್ಗೆ ಕುತೂಹಲ ಕೆರಳಿಸಿದೆ. ತಮೀಮ್ ಇಕ್ಬಾಲ್ ಮತ್ತು ಅಮಾನತುಗೊಂಡಿರುವ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್ ಅವರ ಅನುಪಸ್ಥಿತಿಯಲ್ಲೂ ಬಾಂಗ್ಲಾದ ಪ್ರದರ್ಶನ ಚೆನ್ನಾಗಿದೆ. ರಾಜ್‌ಕೋಟ್‌ನಲ್ಲಿ 153 ರನ್‌ಗಳ ಸವಾಲು ನೀಡಿದ್ದಾರೆ.

20ರ ಹರೆಯದ ಅನೀಮುಲ್ ಇಸ್ಲಾಂ ಕಡಿಮೆ ರನ್‌ಗಳನ್ನು ಬಿಟ್ಟುಕೊಟ್ಟು 4 ವಿಕೆಟ್‌ಗಳನ್ನು ಎಗರಿಸಿದ್ದಾರೆ. ಅವರ ಪ್ರದರ್ಶನವನ್ನು ನಾಯಕ ಮಹ್ಮೂದುಲ್ಲ ಶ್ಲಾಘಿಸಿದ್ದಾರೆ. ಭಾರತಕ್ಕೆ ತಿರುಗೇಟು ನೀಡಲು ಬಾಂಗ್ಲಾದೇಶದ ಬೌಲರ್‌ಗಳು ಚೆನ್ನಾಗಿ ಪ್ರದರ್ಶನ ನೀಡಬೇಕಾಗಿದೆ. ಮುಖ್ಯವಾಗಿ ಪ್ರೀಮಿಯರ್ ಬೌಲರ್ ಮುಸ್ತಫಿಝುರ್ರಹ್ಮಾನ್ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಅಡ್ಡಿಪಡಿಸುವಲ್ಲಿ ವಿಫಲರಾಗಿದ್ದಾರೆ.

ಭಾರತ: ರೋಹಿತ್ ಶರ್ಮಾ(ನಾಯಕ), ಖಲೀಲ್ ಅಹ್ಮದ್, ಯಜುವೇಂದ್ರ ಚಹಾಲ್, ದೀಪಕ್ ಚಹಾರ್, ರಾಹುಲ್ ಚಹಾರ್, ಶಿಖರ್ ಧವನ್, ಶಿವಮ್ ದುಬೆ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಕೃನಾಲ್ ಪಾಂಡ್ಯ, ರಿಷಭ್ ಪಂತ್, ಲೋಕೇಶ್ ರಾಹುಲ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್.

ಬಾಂಗ್ಲಾದೇಶ: ಮಹ್ಮುದುಲ್ಲ ರಿಯಾದ್(ನಾಯಕ), ತೈಜುಲ್ ಇಸ್ಲಾಂ, ಮುಹಮ್ಮದ್ ಮಿಥುನ್, ಲಿಟನ್ ಕುಮಾರ್ ದಾಸ್, ಸೌಮ್ಯ ಸರ್ಕಾರ್, ನಯೀಮ್ ಶೇಖ್, ಮುಶ್ಫೀಕುರ್ರಹೀಂ, ಅಫೀಫ್ ಹುಸೈನ್, ಮೊಸಾದೆಕ್ ಹುಸೈನ್, ಆಮಿನುಲ್ ಇಸ್ಲಾಂ ಬಿಪ್ಲಬ್, ಅರಾಫತ್ ಸುನ್ನಿ, ಅಬು ಹೈದರ್, ಅಲ್ ಆಮಿನ್ ಹುಸೈನ್ , ಮುಸ್ತಾಫಿಝ್ರುರಹ್ಮಾನ್, ಶಫೀಯುಲ್ ಇಸ್ಲಾಂ.

ಪಂದ್ಯದ ಸಮಯ: ರಾತ್ರಿ 7:00 ಗಂಟೆಗೆ ಆರಂಭ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News