ಧನುಷ್‌ಗೆ ಮೂರು ಚಿನ್ನ

Update: 2019-11-13 05:41 GMT

ಪುಣೆ, ನ.11: ದೋಹಾದಲ್ಲಿ ಮಂಗಳವಾರ ನಡೆದ ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶ್ರವಣ ದೋಷ ಹೊಂದಿರುವ ಧನುಷ್ ಶ್ರೀಕಾಂತ್ ತನ್ನ ಚೊಚ್ಚಲ ಅಂತರ್‌ರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರು ಸ್ವರ್ಣದ ಪದಕಗಳನ್ನು ಸಂಪಾದಿಸಿ ಅಮೋಘ ಸಾಧನೆ ಮಾಡಿದರು.

ತೆಲಂಗಾಣದ 16ರ ವಯಸ್ಸಿನ ಬಾಲಕ ಧನುಷ್ ಮುಕ್ತ ಅಂತರ್‌ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಜಯಿಸಿದ ಭಾರತದ ಮೊದಲ ಶ್ರವಣದೋಷವಿರುವ ಶೂಟರ್ ಆಗಿದ್ದಾರೆ. ಇವರು ಜೂನಿಯರ್ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯ ವೈಯಕ್ತಿಕ, ಮಿಶ್ರ ಹಾಗೂ ಟೀಮ್ ಸ್ಪರ್ಧೆಗಳಲ್ಲಿ ಚಿನ್ನ ಜಯಿಸಿದರು.

ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ 248.2 ಅಂಕ ಗಳಿಸಿದ ಧನುಷ್ ಎದುರಾಳಿ ಚೀನಾದ ಜಿಯಾಂಗ್‌ರನ್ನು 2.5 ಅಂಕಗಳಿಂದ ಸೋಲಿಸಿದರು. ಧನುಷ್ ಸಹ ಆಟಗಾರ ಶಾಹು ತುಷಾರ್ ಮಾನೆ(226.4)ಕಂಚು ಜಯಿಸಿದರು.

ಟೀಮ್ ಸ್ಪರ್ಧೆಯಲ್ಲಿ ಧನುಷ್,ಶಾಹು ಮಾನೆ ಹಾಗೂ ಹೃದಯ್ 1877.1 ಅಂಕ ಗಳಿಸಿ ಚಿನ್ನ ಜಯಿಸಿದರು. ಮಿಶ್ರ ಸ್ಪರ್ಧೆಯ ಫೈನಲ್‌ನಲ್ಲಿ ಶ್ರೇಯಾ ಅಗರ್ವಾಲ್ ಜೊತೆ ಸ್ಪರ್ಧಿಸಿದ ಧನುಷ್ ಚೀನಾದ ಜೋಡಿ ಜಿಯಾಂಗ್ ಹಾಗೂ ವಾಂಗ್‌ರನ್ನು 16-14ರಿಂದ ಸೋಲಿಸಿ ಮೊದಲ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News