ಹಾಂಕಾಂಗ್ ಓಪನ್‌ನಿಂದ ಹಿಂದೆ ಸರಿದ ಮೊಮೊಟಾ!

Update: 2019-11-13 06:14 GMT

ಹಾಂಕಾಂಗ್,ನ.12: ವಿಶ್ವದ ನಂ.1 ಆಟಗಾರ ಕೆಂಟೊ ಮೊಮೊಟಾ ಅನಿರೀಕ್ಷಿತ ವಾಗಿ ಮಂಗಳವಾರದಿಂದ ಇಲ್ಲಿ ಆರಂಭವಾದ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದು ಎಲ್ಲರನ್ನು ಅಚ್ಚರಿಗೊಳಿಸಿದರು.

ಮೊಮೊಟಾ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಮೊದಲ ಸುತ್ತಿನ ಎದುರಾಳಿಯಾಗಿದ್ದ ಭಾರತದ ಕಿಡಂಬಿ ಶ್ರೀಕಾಂತ್ ದ್ವಿತೀಯ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಕೆಲವೇ ದಿನಗಳ ಹಿಂದೆ 24ರ ಹರೆಯದ ಮೊಮೊಟಾ ತೈವಾನ್‌ನ ವಿಶ್ವದ ನಂ.2ನೇ ಆಟಗಾರ ಚೌ ಟಿಯೆನ್-ಚೆನ್‌ರನ್ನು ಮಣಿಸಿ ಫುಝೌ ಚೀನಾ ಓಪನ್ ಟೂರ್ನಿಯಲ್ಲಿ 10ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. 2020ರ ಒಲಿಂಪಿಕ್ಸ್‌ಗೆ ಉತ್ತಮ ತಯಾರಿ ನಡೆಸಿದ್ದರು. ಮೊಮೊಟಾ ಹಾಗೂ ಶ್ರೀಕಾಂತ್ ಈ ತನಕ 15 ಬಾರಿ ಮುಖಾಮುಖಿಯಾಗಿದ್ದು, ಜಪಾನ್ ಆಟಗಾರ 12 ಬಾರಿ ಜಯಶಾಲಿಯಾಗಿದ್ದಾರೆ. ಈ ಇಬ್ಬರು ಬುಧವಾರ ಟೂರ್ನಿಯ ಪುರುಷರ ಸಿಂಗಲ್ಸ್ ನ ಮೊದಲ ಪಂದ್ಯದಲ್ಲಿ ಹೋರಾಡಬೇಕಾಗಿತ್ತು. ಆದರೆ, ಮೊಮೊಟಾ ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದೇಕೆ? ಎಂಬ ಪ್ರಶ್ನೆಗೆ ಉತ್ತರ ಲಭಿಸಿಲ್ಲ.

ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಸಹ ಆಟಗಾರ ಸೌರಭ್ ವರ್ಮಾ ಅಥವಾ ಫ್ರಾನ್ಸ್‌ನ ಬ್ರೈಸ್ ಲೆವೆರ್‌ಡೆಝ್‌ರನ್ನು ಎದುರಿಸಲಿದ್ದಾರೆ. 26ರ ಹರೆಯದ ಶ್ರೀಕಾಂತ್ ಅಕ್ಟೋಬರ್‌ನಲ್ಲಿ ನಡೆದಿದ್ದ ಡೆನ್ಮಾರ್ಕ್ ಓಪನ್‌ನಲ್ಲಿ ಸೋತ ಬಳಿಕ ಮಿಶ್ರ ಫಲಿತಾಂಶ ದಾಖಲಿಸುತ್ತಿದ್ದಾರೆ.

 ಮೊಮೊಟಾ ಈ ತನಕ 300ಕ್ಕೂ ಅಧಿಕ ಪಂದ್ಯಗಳಲ್ಲಿ ಜಯಶಾಲಿಯಾಗಿದ್ದು, 2016ರಲ್ಲಿ ಅವರ ವೃತ್ತಿಜೀವನದಲ್ಲಿ ವಿವಾದ ಸುತ್ತುವರಿದಿತ್ತು. ಅಕ್ರಮ ಕ್ಯಾಸಿನೊಗೆ ಭೇಟಿ ನೀಡಿದ ಕಾರಣಕ್ಕೆ ಅವರನ್ನು 2016ರಲ್ಲಿ ಒಂದು ವರ್ಷಕ್ಕೂ ಅಧಿಕ ಸಮಯ ನಿಷೇಧಿಸಲಾಗಿತ್ತು. 2016ರ ರಿಯೋ ಒಲಿಂಪಿಕ್ಸ್‌ಗೆ ಅವರಿಗೆ ಸ್ಥಾನ ನಿರಾಕರಿಸಲಾಗಿತ್ತು. ಆಗ ಮೊಮೊಟಾ ವಿಶ್ವದ ನಂ.2ನೇ ಆಟಗಾರನಾಗಿದ್ದರು. ಆ ಬಳಿಕ ಮತ್ತೆ ನಂ.1 ಸ್ಥಾನ ವಶಪಡಿಸಿಕೊಂಡಿದ್ದ ಮೊಮೊಟಾ ಇತ್ತೀಚೆಗೆ ಚೀನಾ ಓಪನ್ ಪ್ರಶಸ್ತಿ ಜಯಿಸಿ ಟೋಕಿಯೊ ಗೇಮ್ಸ್‌ಗೆ ಮುಂಚಿತವಾಗಿ ಒಲಿಂಪಿಕ್ಸ್ ಪದಕ ಗೆಲ್ಲುವ ವಿಶ್ವಾಸವನ್ನು ಮೂಡಿಸಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಮೊಮೊಟಾ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಪುರುಷರ ಪ್ರಶಸ್ತಿ ಜಯಿಸಿದ ಜಪಾನ್‌ನ ಮೊದಲ ಆಟಗಾರ ಎನಿಸಿಕೊಂಡಿದ್ದರು. ಜಪಾನ್ ಓಪನ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದರು. ಚೀನಾ ಓಪನ್, ಕೊರಿಯಾ ಓಪನ್ ಹಾಗೂ ಡೆನ್ಮಾರ್ಕ್ ಓಪನ್‌ನಲ್ಲಿ ಜಯಭೇರಿ ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News