ಮಾಯಾಂಕ್ ಅಗರ್ವಾಲ್ ದ್ವಿಶತಕ: ಭಾರತ 493/6

Update: 2019-11-15 12:25 GMT

ಇಂದೋರ್, ನ.15: ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ದ್ವಿಶತಕದ ನೆರವಿನಲ್ಲಿ ಭಾರತ ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸಿದೆ.

ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೆಸ್ಟ್‌ನ ಎರಡನೇ ದಿನದಾಟದಂತ್ಯಕ್ಕೆ ಭಾರತ 114 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 493 ರನ್ ಗಳಿಸಿದೆ.
ಆಲ್‌ರೌಂಡರ್ ರವೀಂದ್ರ ಜಡೇಜ 60ರನ್ ಮತ್ತು ಉಮೇಶ್ ಯಾದವ್ 25 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ. ಮಾಯಾಂಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ದ್ವಿಶತಕ ದಾಖಲಿಸಿದರು. ಅವರು 243 ರನ್(330ಎ, 28ಬೌ,8ಸಿ) ಗಳಿಸಿ ಔಟಾದರು.

ಮೊದಲ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಭಾರತ 26 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 86 ರನ್ ಗಳಿಸಿತ್ತು. 37 ರನ್ ಗಳಿಸಿರುವ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ಮತ್ತು 43 ರನ್ ಗಳಿಸಿರುವ ಚೇತೇಶ್ವರ್ ಪೂಜಾರ ಔಟಾಗದೆ ಕ್ರೀಸ್‌ನಲ್ಲಿದ್ದರು. ಇವರು ಬ್ಯಾಟಿಂಗ್ ಮುಂದುವರಿಸಿ ಎರಡನೇ ವಿಕೆಟ್‌ಗೆ 91 ರನ್‌ಗಳ ಜೊತೆಯಾಟ ನೀಡಿದರು.

ಚೇತೇಶ್ವರ್ ಪೂಜಾರ ಅರ್ಧಶತಕ (54) ದಾಖಲಿಸಿ ಔಟಾದರು. ಪೂಜಾರ ನಿರ್ಗಮನದ ಬಳಿಕ ನಾಯಕ ವಿರಾಟ್ ಕೊಹ್ಲಿ ಕ್ರೀಸ್‌ಗೆ ಆಗಮಿಸಿದರೂ ಅವರು ಕೇವಲ 2 ಎಸೆತಗಳನ್ನು ಎದುರಿಸಿದರು. ಖಾತೆ ತೆರೆಯುವ ಮೊದಲೇ ಅವರನ್ನು ಅಬು ಜಾಯೆದ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.

4ನೇ ವಿಕೆಟ್‌ಗೆ ಅಜಿಂಕ್ಯ ರಹಾನೆ ಅವರು ಅಗರ್ವಾಲ್ ಜೊತೆಯಾಗಿ 190 ರನ್‌ಗಳ ಕೊಡುಗೆ ನೀಡಿದರು. ರಹಾನೆ 86 ರನ್(172ಎ, 9ಬೌ) ಗಳಿಸಿ ಜಾಯೆದ್ ಎಸೆತದಲ್ಲಿ ತೈಜುಲ್ ಇಸ್ಲಾಮ್‌ಗೆ ಕ್ಯಾಚ್ ನೀಡುವ ಮೂಲಕ ಶತಕ ವಂಚಿತಗೊಂಡರು.

8ನೇ ಟೆಸ್ಟ್ ಆಡುತ್ತಿರುವ ಕರ್ನಾಟಕದ ಅಗ್ರಸರದಿಯ ದಾಂಡಿಗ ಅಗರ್ವಾಲ್ 183 ಎಸೆತಗಳನ್ನು ಎದುರಿಸಿ 15ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 3ನೇ ಶತಕ ದಾಖಲಿಸಿದರು. ಬಳಿಕ ಬ್ಯಾಟಿಂಗ್ ಮುಂದುವರಿಸಿ ಎರಡನೇ ದ್ವಿಶತಕ (303ಎ, 25ಬೌ, 5ಸಿ) ಪೂರೈಸಿದರು.

ಆಲ್‌ರೌಂಡರ್ ರವಿಂದ್ರ ಜಡೇಜ ಮತ್ತು ಅಗರ್ವಾಲ್ ಐದನೇ ವಿಕೆಟ್‌ಗೆ 126 ರನ್‌ಗಳ ಜೊತೆಯಾಟ ನೀಡಿದರು. ವೃದ್ಧಿಮಾನ್ ಸಹಾ 12ರನ್ ಗಳಿಸಿ ನಿರ್ಗಮಿಸಿದರು. 7ನೇ ವಿಕೆಟ್‌ಗೆ ಜಡೇಜ ಮತ್ತು ಉಮೇಶ ಯಾದವ್ ಮುರಿಯದ ಜೊತೆಯಾಟದಲ್ಲಿ 61 ರನ್ ಸೇರಿಸಿ ಬ್ಯಾಟಿಂಗ್‌ನ್ನು ಮೂರನೇ ದಿನಕ್ಕೆ ಕಾಯ್ದಿರಿಸಿದ್ದಾರೆ. ಜಡೇಜ 60 ರನ್(76ಎ, 5ಬೌ, 2ಸಿ) ಮತ್ತು ಯಾದವ್ 25 ರನ್(10ಎ, 1ಬೌ, 3ಸಿ) ಗಳಿಸಿದರು.

ಬಾಂಗ್ಲಾದ ವೇಗಿ ಅಬು ಜಾಯೆದ್ 108ಕ್ಕೆ 4 ವಿಕೆಟ್ ಪಡೆದು ಮಿಂಚಿದರು. ಇಬಾದತ್ ಹುಸೈನ್ ಮತ್ತು ಮೆಯೆದಿ ಹಸನ್ ತಲಾ 1 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News