ಮೊದಲ ಟೆಸ್ಟ್: ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯ ಆರಂಭಿಕ ಮೇಲುಗೈ

Update: 2019-11-21 17:45 GMT

ಬ್ರಿಸ್ಬೇನ್, ನ.21: ಆಸ್ಟ್ರೇಲಿಯ ತಂಡ ಮೊದಲ ಟೆಸ್ಟ್‌ನ ಮೊದಲ ದಿನವೇ ಲಾಭ ಎತ್ತಲು ಯಶಸ್ವಿಯಾಗಿದ್ದು, ಎದುರಾಳಿ ಪಾಕಿಸ್ತಾನವನ್ನು ಕೇವಲ 240 ರನ್‌ಗೆ ಆಲೌಟ್ ಮಾಡಿ ಆರಂಭಿಕ ಮೇಲುಗೈ ಸಾಧಿಸಿದೆ.

ಇಲ್ಲಿನ ಗಾಬಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಟಾಸ್ ಜಯಿಸಿದ ಪಾಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರರಾದ ಅಝರ್ ಅಲಿ ಹಾಗೂ ಶಾನ್ ಮಸೂದ್ ಎಚ್ಚರಿಕೆಯ ಆರಂಭ ನೀಡಿದರು. ಪಾಕ್ ಲಂಚ್ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿತು. 50 ರನ್ ಗಳಿಸಲು ಸುಮಾರು 2 ಗಂಟೆ ತೆಗೆದುಕೊಂಡಿತು. ತ್ರಿವಳಿ ವೇಗಿಗಳಾದ ಮಿಚೆಲ್ ಸ್ಟಾರ್ಕ್(4-52), ಜೋಶ್ ಹೇಝಲ್‌ವುಡ್(2-46) ಹಾಗೂ ಪ್ಯಾಟ್ ಕಮಿನ್ಸ್(3-60)ಪಾಕಿಸ್ತಾನದ ಬ್ಯಾಟಿಂಗ್ ಸರದಿಗೆ ಸವಾಲಾಗಿ ದಿನದಾಟದಂತ್ಯಕ್ಕೆ ಪಾಕಿಸ್ತಾನವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ನೆರವಾದರು. ಲಂಚ್ ವಿರಾಮದ ಬಳಿಕ ಆಸ್ಟ್ರೇಲಿಯ ತಂಡ ಪಾಕ್ ಮೇಲೆ ಸವಾರಿ ಮಾಡಿತು. ವಿಕೆಟ್ ನಷ್ಟವಿಲ್ಲದೆ 75 ರನ್ ಗಳಿಸಿದ್ದ ಪಾಕ್ 78 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಬಳಿಕ 94 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.

76 ರನ್ ಗಳಿಸಿದ ಅಸದ್ ಶಫೀಕ್ ಏಕಾಂಗಿ ಹೋರಾಟ ನೀಡಿ ತಂಡಕ್ಕೆ ಆಸರೆಯಾದರು. ಪಾಕ್ 75 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಇಳಿದಿದ್ದ ಶಫೀಕ್, ಮುಹಮ್ಮದ್ ರಿಝ್ವಾನ್(37)ಅವರೊಂದಿಗೆ 49 ರನ್ ಹಾಗೂ ಯಾಸಿರ್ ಶಾ(26) ಅವರೊಂದಿಗೆ 84 ರನ್ ಜೊತೆಯಾಟ ನಡೆಸಿ ಪ್ರವಾಸಿ ತಂಡ ಗೌರವಾರ್ಹ ಮೊತ್ತ ತಲುಪಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News