ಆಸ್ಟ್ರೇಲಿಯದಲ್ಲಿ ಚೊಚ್ಚಲ ಟೆಸ್ಟ್ ಆಡಿದ ಯುವ ಬೌಲರ್ ನಸೀಂ ಶಾ

Update: 2019-11-21 17:46 GMT

ಬ್ರಿಸ್ಬೇನ್, ನ.21: ಹದಿನಾರರ ಹರೆಯದ ಪಾಕಿಸ್ತಾನದ ವೇಗದ ಬೌಲರ್ ನಸೀಂ ಶಾ ಗುರುವಾರ ಆಸ್ಟ್ರೇಲಿಯದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಕಿರಿಯ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾದರು.

ಗಾಬಾದಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಮೂಲಕ ಶಾ ಈ ಗೌರವಕ್ಕೆ ಪಾತ್ರರಾದರು.

16 ವರ್ಷ ಹಾಗೂ 279ನೇ ದಿನದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ನಸೀಂ 1953ರಲ್ಲಿ ಎಂಸಿಜಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 17ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿರುವ ಆಸ್ಟ್ರೇಲಿಯದ ಮಾಜಿ ನಾಯಕ ಇಯಾನ್ ಕ್ರೆಗ್ ದಾಖಲೆಯನ್ನು ಮುರಿದರು.

ನಸೀಂ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಮೂರನೇ ಕಿರಿಯ ವೇಗದ ಬೌಲರ್ ಆಗಿದ್ದಾರೆ. ಬಾಂಗ್ಲಾದೇಶದ ಮುಹಮ್ಮದ್ ಶರೀಫ್ ಹಾಗೂ ತಮ್ಮದೇ ದೇಶದ ಆಖೀಬ್ ಜಾವೇದ್ ಬಳಿಕ ಈ ಸಾಧನೆ ಮಾಡಿರುವ ಮೂರನೇ ವೇಗದ ಬೌಲರ್ ಆಗಿದ್ದಾರೆ.

ಬೌಲಿಂಗ್ ಕೋಚ್ ವಕಾರ್ ಯೂನಿಸ್‌ರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿದ ನಸೀಂ ಶಾ ಭಾವುಕರಾದರು. ಕ್ಯಾಪ್‌ಗೆ ಮುತ್ತಿಟ್ಟ ನಸೀಂ ಸಹ ಆಟಗಾರ ಶಾಹೀನ್ ಅಫ್ರಿದಿಯನ್ನು ತಬ್ಬಿಕೊಂಡರು. ಚೊಚ್ಚಲ ಟೆಸ್ಟ್ ಆಡಿದ ನಸೀಂಗೆ ಸಹ ಆಟಗಾರರು ಅಭಿನಂದನೆ ಸಲ್ಲಿಸಿದಾಗ ನಸೀಂ ಶಾ ಆನಂದಭಾಷ್ಪ ಸುರಿಸಿದರು.

ಕಳೆದ ವಾರ ಆಸ್ಟ್ರೇಲಿಯ ‘ಎ’ ತಂಡದ ವಿರುದ್ಧ ಅತ್ಯುತ್ತಮ ಸ್ಪೆಲ್ ಎಸೆದಿದ್ದ ನಸೀಂ ಮೊದಲ ಟೆಸ್ಟ್‌ನ ಆಡುವ 11ರ ಬಳಗವನ್ನು ಸೇರಿಕೊಂಡಿದ್ದಾರೆ. ಪರ್ತ್ ಪಿಚ್‌ನ ಹೆಚ್ಚುವರಿ ಬೌನ್ಸ್‌ನ ಲಾಭ ಪಡೆದಿದ್ದ ನಸೀಂ ಅವರು ಮಾರ್ಕಸ್ ಹ್ಯಾರಿಸ್ ವಿಕೆಟ್ ಪಡೆದಿದ್ದರು. ಆಸ್ಟ್ರೇಲಿಯ ಪ್ರವಾಸದಲ್ಲಿರುವಾಗಲೇ ನಸೀಂ ಶಾ ಅವರ ತಾಯಿ ನಿಧನರಾಗಿದ್ದಾರೆ. ಕುಟುಂಬ ಸದಸ್ಯರನ್ನು ಸಂಪರ್ಕಿಸಿದ ಬಳಿಕ ಸ್ವದೇಶಕ್ಕೆ ವಾಪಸಾಗದೆ ಇರಲು ನಿರ್ಧರಿಸಿದರು. ಶಾ ಕೇವಲ 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 16.66ರ ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ನಸೀಂ ಶಾ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಗೈದಿರುವ 9ನೇ ಯುವ ಕ್ರಿಕೆಟಿಗರಾಗಿದ್ದಾರೆ. ಪಾಕಿಸ್ತಾನದ ಹಸನ್ ರಾಝಾ 1996ರಲ್ಲಿ 14 ವರ್ಷ ಹಾಗೂ 227 ದಿನಗಳಲ್ಲಿ ಚೊಚ್ಚಲ ಪಂದ್ಯ ಆಡಿದ್ದರು. ರಾಝಾ ಪಾಕ್ ಪರ ಟೆಸ್ಟ್ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News