ವಿಂಡೀಸ್ ವಿರುದ್ಧ 5-0 ಅಂತರದಿಂದ ಕ್ಲೀನ್‌ಸ್ವೀಪ್‌ಗೆದ ಭಾರತ

Update: 2019-11-21 17:48 GMT

ಗಯಾನ, ನ.21: ವೇದಾ ಕೃಷ್ಣಮೂರ್ತಿ ಹಾಗೂ ಜೆಮಿಮಾ ರೋಡ್ರಿಗಸ್ ಅವರ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಹಾಗೂ ಕೊನೆಯ ಟ್ವೆಂಟಿ-20 ಪಂದ್ಯವನ್ನು 61 ರನ್‌ಗಳಿಂದ ಜಯಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು 5-0 ಅಂತರದಿಂದ ವಶಪಡಿಸಿಕೊಂಡು ಕ್ಲೀನ್‌ಸ್ವೀಪ್ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ರೋಡ್ರಿಗಸ್(50)ಹಾಗೂ ವೇದಾ(ಔಟಾಗದೆ 57)ಮೂರನೇ ವಿಕೆಟ್‌ಗೆ ಸೇರಿಸಿದ 117 ರನ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 134 ರನ್ ಗಳಿಸಿತು. ಭಾರತ 4ನೇ ಓವರ್‌ನಲ್ಲಿ 17 ರನ್‌ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಶೆಫಾಲಿ ವರ್ಮಾ(9) ಹಾಗೂ ನಾಯಕಿ ಸ್ಮತಿ ಮಂಧಾನ(7)ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ರೋಡ್ರಿಗಸ್ ಹಾಗೂ ವೇದಾ ತಂಡವನ್ನು ಆಧರಿಸಿ ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ರೋಡ್ರಿಗಸ್ 56 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 50 ರನ್ ಗಳಿಸಿದರೆ, ಜೀವನಶ್ರೇಷ್ಠ ಇನಿಂಗ್ಸ್(ಔಟಾಗದೆ 57)ಆಡಿದ ವೇದಾ 48 ಎಸೆತಗಳನ್ನು ಎದುರಿಸಿ 4 ಬೌಂಡರಿ ಗಳಿಸಿದರು. ಗೆಲ್ಲಲು 135 ರನ್ ಚೇಸಿಂಗ್‌ಗೆ ತೊಡಗಿದ್ದ ವಿಂಡೀಸ್ ಮಹಿಳಾ ತಂಡಕ್ಕೆ ಭಾರತದ ಮಹಿಳಾ ಬೌಲರ್‌ಗಳು ಶಿಸ್ತುಬದ್ಧ ಪ್ರದರ್ಶನದಿಂದ ಸವಾಲಾದರು. ಆತಿಥೇಯ ವಿಂಡೀಸ್‌ನ್ನು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 73 ರನ್‌ಗೆ ನಿಯಂತ್ರಿಸಿದರು.

ವಿಂಡೀಸ್ ನಾಲ್ಕನೇ ಓವರ್‌ನಲ್ಲಿ 13 ರನ್ ಗಳಿಸಿ 2 ವಿಕೆಟ್ ಪಡೆದಿತ್ತು. ಆ ಬಳಿಕ ಚೇತರಿಸಿಕೊಳ್ಳಲು ವಿಫಲವಾಯಿತು. ಆರಂಭಿಕ ಆಟಗಾರ್ತಿ ಕಿಶೊನಾ ನೈಟ್ 22 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಶೆಮೈನ್ ಕ್ಯಾಂಪ್‌ಬೆಲ್ ಔಟಾಗದೆ 19 ರನ್ ಗಳಿಸಿದರು. ಭಾರತದ ಪರ ಆಫ್ ಸ್ಪಿನ್ನರ್ ಅನುಜಾ ಪಾಟೀಲ್ ಕೇವಲ 3 ರನ್‌ಗೆ 2 ವಿಕೆಟ್ ಪಡೆದರೆ, ರಾಧಾ ಯಾದವ್, ಪೂನಂ ಯಾದವ್, ಪೂಜಾ ವಸ್ತ್ರಕರ್ ಹಾಗೂ ಹರ್ಲೀನ್ ಡಿಯೊಲ್ ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News