ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್: ಮನು, ಇಳವೆನಿಲ್, ದಿವ್ಯಾಂಶ್ ಗೆ ಚಿನ್ನ

Update: 2019-11-21 17:49 GMT

ಪುಟಿಯನ್(ಚೀನಾ), ನ.21: ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಯುವ ಶೂಟರ್‌ಗಳಾದ ಮನು ಭಾಕೆರ್, ಇಳವೆನಿಲ್ ವಾಲರಿವಾನ್ ಹಾಗೂ ದಿವ್ಯಾಂಶ್ ಪನ್ವಾರ್ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿ ಚಿನ್ನದ ಪದಕ ಜಯಿಸಿದರು. ಈ ಮೂಲಕ ಒಂದೇ ದಿನದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದೆ.

ಗುರುವಾರ ಇಲ್ಲಿ ನಡೆದ ಮಹಿಳೆಯರ 10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಜೂನಿಯರ್ ವಿಶ್ವ ದಾಖಲೆ ನಿರ್ಮಿಸಿದ 17ರ ಹರೆಯದ ಮನು ಬಾಕೆರ್ ಚಿನ್ನದ ಪದಕ ಜಯಿಸಿದರು. 20ರ ಹರೆಯದ ಇಳವೆನಿಲ್ ಮಹಿಳೆಯರ 10 ಮೀ.ಏರ್ ರೈಫಲ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡರು.

ಇನ್ನೋರ್ವ ಯುವ ಶೂಟರ್ ದಿವ್ಯಾಂಶ್(17ವರ್ಷ)ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯ ಫೈನಲ್‌ನಲ್ಲಿ 250.1 ಅಂಕ ಗಳಿಸಿ ಅಗ್ರ ಸ್ಥಾನ ಪಡೆದರು. ಹಂಗೇರಿಯದ ಇಸ್ಟವಾನ್ ಪೆನಿ(250) ಹಾಗೂ ಸ್ಲೋವಾಕಿಯದ ಪ್ಯಾಟ್ರಿಕ್ ಜಾನಿ(228.4)ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ. ಮೂರು ಚಿನ್ನದ ಪದಕ ಜಯಿಸಿರುವ ಭಾರತ ಪದಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಚೀನಾ(ಎರಡು ಚಿನ್ನ,1 ಬೆಳ್ಳಿ, 1 ಕಂಚು)ಎರಡನೇ ಸ್ಥಾನದಲ್ಲಿದೆ.

ವರ್ಷದ ಕೊನೆಯ ಪ್ರತಿಷ್ಠಿತ ಐಎಸ್‌ಎಸ್‌ಎಫ್ ಟೂರ್ನಿಯಲ್ಲಿ ಮನು ಭಾಕೆರ್ 244.4 ಅಂಕ ಗಳಿಸಿ ಮೊದಲ ಸ್ಥಾನ ಪಡೆದರೆ, ಮನು ಸಹ ಶೂಟರ್‌ಗಳಾದ ಯಶಸ್ವಿನಿ ಸಿಂಗ್ ದೇಸ್ವಾಲ್ ಫೈನಲ್‌ನಲ್ಲಿ ಆರನೇ ಸ್ಥಾನ ಪಡೆದರು. ಸರ್ಬಿಯದ ರೊರಾನಾ ಅರುನೊವಿಕ್(241.9)ಬೆಳ್ಳಿ, ಚೀನಾದ ಕ್ಯೂಯಾನ್ ವಾಂಗ್(221.8 ಅಂಕ)ಕಂಚಿನ ಪದಕ ಜಯಿಸಿದರು. ಇಳವೆನಿಲ್ 250.8 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ತೈವಾನ್‌ನ ಲಿನ್ ಯಿಂಗ್-ಶಿನ್(250.7)ಎರಡನೇ ಹಾಗೂ ರೋಮಾನಿಯಾದ ಲೌರಾ-ಜಾರ್ಜೆಟಾ ಕಾಮನ್(229)ಮೂರನೇ ಸ್ಥಾನ ಪಡೆದಿದ್ದಾರೆ.

ಇಳವೆನಿಲ್ ಅರ್ಹತಾ ಸುತ್ತಿನಲ್ಲಿ 631.1 ಅಂಕ ಗಳಿಸಿ ಎರಡನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದರು. ಮೆಹುಲಿ ಘೋಷ್ ಫೈನಲ್‌ಗೆ ಪ್ರವೇಶಿಸಿದ್ದರೂ 163.8 ಅಂಕ ಗಳಿಸಿ ಆರನೇ ಸ್ಥಾನ ಪಡೆದರು. ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮಾ ಹಾಗೂ ಸೌರಭ್ ಚೌಧರಿ ಫೈನಲ್‌ಗೆ ಅರ್ಹತೆ ಪಡೆದಿದ್ದರು.ಆದರೆ ಪದಕ ಜಯಿಸುವಲ್ಲಿ ವಿಫಲರಾದರು. ವರ್ಮಾ ಅರ್ಹತಾ ಸುತ್ತಿನಲ್ಲಿ 588 ಅಂಕ ಗಳಿಸಿ ಅಗ್ರಸ್ಥಾನ ಪಡೆದರು. ಆದರೆ, ಫೈನಲ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅರ್ಹತಾ ಸುತ್ತಿನಲ್ಲಿ 581 ಅಂಕ ಗಳಿಸಿ ಮೊದಲ ಸ್ಥಾನ ಪಡೆದಿದ್ದ ಚೌಧರಿ 8 ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ 159.8 ಅಂಕ ಗಳಿಸಿ ಆರನೇ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News