ಪಿಂಕ್ ಬಾಲ್ ಹಣಾಹಣಿಗೆ ಈಡನ್ ಗಾರ್ಡನ್ಸ್ ಸಜ್ಜು

Update: 2019-11-21 17:52 GMT

ಕೋಲ್ಕತಾ, ನ.21: ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಪಂದ್ಯ ಶುಕ್ರವಾರ ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ನಲ್ಲಿ ಆರಂಭಗೊಳ್ಳಲಿದ್ದು, ಗುಲಾಬಿ ಬಣ್ಣದ ಚೆಂಡಿನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಮಧ್ಯೆ ನಡೆಯಲಿರುವ ಈ ಪಂದ್ಯ ಉಭಯ ದೇಶಗಳ ಪಾಲಿಗೆ ಸ್ಮರಣೀಯವಾಗಲಿದೆ.

ಐಸಿಸಿ ವಿಶ್ವ ಚಾಂಪಿಯನ್‌ಶಿಪ್‌ನ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ, ಒಂದು ವಾರದ ಹಿಂದೆ ಇಂದೋರ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು ಇನಿಂಗ್ಸ್ ಮತ್ತು 130 ರನ್‌ಗಳಿಂದ ಸೋಲಿಸಿತ್ತು.

ಐದು ದಿನಗಳ ಟೆಸ್ಟ್ ಪಂದ್ಯವು ಮೂರು ದಿನಗಳ ಒಳಗಾಗಿ ಮುಗಿಯಿತು. ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ಮೊದಲ ಇನಿಂಗ್ಸ್‌ನಲ್ಲಿ 243 ರನ್ ದಾಖಲಿಸಿದ್ದರು. ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿ 150 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 213 ರನ್ ಗಳಿಸಿತ್ತು. ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ತಂಡವು ಆಡಿರುವ ಎಲ್ಲಾ ಆರು ಪಂದ್ಯಗಳನ್ನು ಗೆದ್ದಿದೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ. ನಾಯಕ ಕೊಹ್ಲಿಗೆ ಗುಲಾಬಿ ಚೆಂಡಿನಲ್ಲಿ ಆಡಿರುವ ಅನುಭವವಿಲ್ಲ. ಬಾಂಗ್ಲಾ ತಂಡದ ಯಾರೂ ಕೂಡಾ ಈ ತನಕ ಗುಲಾಬಿ ಚೆಂಡಿನಲ್ಲಿ ಆಡಿಲ್ಲ.

ಭಾರತ ಇದೀಗ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಕ್ಲೀನ್ ಸ್ವೀಪ್ ಸಾಧಿಸಲು ಎದುರು ನೋಡುತ್ತಿದೆ. ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಬಾಂಗ್ಲಾದೇಶದ ಸಾರ್ವಕಾಲಿಕ ಅತ್ಯುತ್ತಮ ಕ್ರಿಕೆಟಿಗ. ಆದರೆ ಐಸಿಸಿ ಅವರಿಗೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಬಾಂಗ್ಲಾಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ಭಾರತವು ಗುಲಾಬಿ ಚೆಂಡಿನಲ್ಲಿ ಟೆಸ್ಟ್ ನ್ನು ಮೊದಲ ಬಾರಿ ಆಡುತ್ತಿದೆ. ಈಡನ್‌ನಲ್ಲಿ ಎಸ್‌ಜಿ ಚೆಂಡಿನಲ್ಲಿ ಆಡಲಾಗುವುದು. ಸಂಜೆ ಅದು ಹೇಗೆ ವರ್ತಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸಂಜೆ ಇಬ್ಬನಿ ಬೀಳುವುದರಿಂದ ಆಟಕ್ಕೆ ಸಮಸ್ಯೆಯಾಗುತ್ತದೆ. ಇದನ್ನು ತಪ್ಪಿಸಲು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಆಟ ಆರಂಭವಾಗಲಿದೆ. ರಿವರ್ಸ್‌ಸ್ವಿಂಗ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಭಾರತೀಯ ವೇಗಿಗಳು ಯಶಸ್ಸು ಸಾಧಿಸಿದ್ದಾರೆ. ಗಾಯಾಳು ಜಸ್ಪ್ರಿತ್ ಬುಮ್ರಾ ಅನುಪಸ್ಥಿತಿಯಲ್ಲೂ ಮುಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಬಾಂಗ್ಲಾದೇಶವನ್ನು ಕಡಿಮೆ ಮೊತ್ತಕ್ಕೆ ಕಳೆದ ಪಂದ್ಯದಲ್ಲಿ ನಿಯಂತ್ರಿಸಿದ್ದರು. ಶಮಿ ಏಳು ವಿಕೆಟ್‌ಗಳನ್ನು ಕಬಳಿಸಿದರೆ ಇಶಾಂತ್ ಮತ್ತು ಉಮೇಶ್ ಕ್ರಮವಾಗಿ ಮೂರು ಮತ್ತು ನಾಲ್ಕು ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News