ಈಡನ್‌ಗಾರ್ಡನ್ಸ್ ನ ಗಂಟೆ ಬಾರಿಸಿ ಪಿಂಕ್ ಬಾಲ್ ಟೆಸ್ಟ್ ಗೆ ಹಸೀನಾ, ಮಮತಾ ಬ್ಯಾನರ್ಜಿ ಚಾಲನೆ

Update: 2019-11-22 17:57 GMT

ಕೋಲ್ಕತಾ, ನ.22: ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಝ್ಮುಲ್ ಹಸನ್ ಹಾಗೂ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಸಹಿತ ಹಲವು ಗಣ್ಯರ ಉಪಸ್ಥಿತಿಯಲ್ಲಿ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಶುಕ್ರವಾರ ಮಧ್ಯಾಹ್ನ 12:58ರ ಸುಮಾರಿಗೆ ಗಂಟೆ ಬಾರಿಸುವ ಮೂಲಕ ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಬಹುನಿರೀಕ್ಷಿತ ಮೊದಲ ಬಾರಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಚಾಲನೆ ನೀಡಿದರು.

ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಆರ್ಮಿ ಬ್ಯಾಂಡ್ ರಾಷ್ಟ್ರಗೀತೆಯನ್ನು ನುಡಿಸುವ ಮೊದಲು ಹಸೀನಾ ಹಾಗೂ ಮಮತಾ ತಂಡಗಳನ್ನು ಭೇಟಿಯಾದರು. ಸಮಾರಂಭಕ್ಕೆ ಹಾಜರಾಗಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೈರುಹಾಜರಾಗಿದ್ದರು.

ಟಾಸ್‌ಗಿಂತ ಮೊದಲು ಆರ್ಮಿ ಪ್ಯಾರಾಟ್ರೂಪರ್ಸ್ ಈಡನ್‌ಗೆಹಾರಿಬಂದು ಉಭಯ ತಂಡದ ನಾಯಕರಿಗೆ ಪಿಂಕ್ ಬಾಲ್ ನೀಡುವ ಮೂಲಕ ಹಗಲು-ರಾತ್ರಿ ಪಂದ್ಯಕ್ಕೆ ಚಾಲನೆ ನೀಡಬೇಕಾಗಿತ್ತು.ಆದರೆ, ಭದ್ರತಾ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆ ಈ ಕಾರ್ಯಕ್ರಮವನ್ನು ರದ್ದುಪಡಿಸಿದೆ.

ಮಾಜಿ ಕ್ರಿಕೆಟಿಗರಾದ ಎಸ್.ರಮೇಶ್, ಸಾಬಾ ಕರೀಂ, ಸುನೀಲ್ ಜೋಶಿ,ಅಜಿತ್ ಅಗರ್ಕರ್, ವೆಂಕಟೇಶ್‌ಪ್ರಸಾದ್, ಕಪಿಲ್‌ದೇವ್, ದಿಲಿಪ್ ವೆಂಗ್‌ಸರ್ಕಾರ್, ಮುಹಮ್ಮದ್ ಅಝರುದ್ದೀನ್, ಕ್ರಿಸ್ ಶ್ರೀಕಾಂತ್, ಫಾರೂಖ್ ಇಂಜಿನಿಯರ್ ಹಾಗೂ ಚಂದು ಬೋರ್ಡೆ ಉಪಸ್ಥಿತರಿದ್ದರು. ವಿವಿಧ ಕ್ರೀಡೆಗಳ ಕ್ರೀಡಾಳುಗಳಾದ ಅಭಿನವ್ ಬಿಂದ್ರಾ, ಪಿ.ಗೋಪಿಚಂದ್, ಪಿ.ವಿ.ಸಿಂಧು, ಸಾನಿಯಾ ಮಿರ್ಝಾ ಹಾಗೂ ಮೇರಿಕೋಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News