×
Ad

ರಾಹುಲ್ ಅರ್ಧಶತಕ, ಕರ್ನಾಟಕಕ್ಕೆ ಹ್ಯಾಟ್ರಿಕ್ ಗೆಲುವು

Update: 2019-11-24 23:28 IST

ಸೂರತ್, ನ.24: ಕೆ.ಎಲ್. ರಾಹುಲ್ ಸಿಡಿಸಿದ ಆಕರ್ಷಕ ಅರ್ಧಶತಕದ(ಔಟಾಗದೆ 84 ರನ್,7 ಬೌಂಡರಿ,4 ಸಿಕ್ಸರ್)ನೆರವಿನಿಂದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಪಂಜಾಬ್ ವಿರುದ್ಧ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಮೆಂಟ್‌ನ ‘ಬಿ’ ಗುಂಪಿನ ಸೂಪರ್ ಲೀಗ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ.

ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ ವೇಗದ ಬೌಲರ್ ರೋನಿತ್ ಮೋರೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡವನ್ನು 6 ವಿಕೆಟ್‌ಗಳ ನಷ್ಟಕ್ಕೆ 163 ರನ್‌ಗೆ ನಿಯಂತ್ರಿಸಿದರು. ರಾಹುಲ್ ಬಿರುಸಿನ ಬ್ಯಾಟಿಂಗ್ ಮಾಡಿ(48 ಎಸೆತ, 84 ರನ್)ಇನ್ನೂ ಎರಡು ಓವರ್‌ಗಳು ಬಾಕಿ ಇರುವಾಗಲೇ ಕರ್ನಾಟಕವನ್ನು ಗೆಲುವಿನ ದಡ ಸೇರಿಸಿದರು.

ಕರ್ನಾಟಕ ಟೂರ್ನಮೆಂಟ್‌ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಇನ್ನೊಂದು ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸೆಮಿ ಫೈನಲ್ ತಲುಪಬಹುದು.

ಭಾರತೀಯ ಟೆಸ್ಟ್ ತಂಡದಿಂದ ಬಿಡುಗಡೆಯಾಗಿ ಬಂದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಪಂಜಾಬ್ ಇನಿಂಗ್ಸ್ ಆರಂಭಿಸಿ ಕೇವಲ 11 ರನ್ ಗಳಿಸಿ ಔಟಾದರು. ಇನ್ನೋರ್ವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ(5)ಅಲ್ಪ ಮೊತ್ತಕ್ಕೆ ಔಟಾದ ಕಾರಣ ಪಂಜಾಬ್ 18 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿತು.

ನಾಯಕ ಮನ್‌ದೀಪ್ ಸಿಂಗ್(76 ರನ್, 50 ಎಸೆತ, 9ಬೌಂಡರಿ,2 ಸಿಕ್ಸರ್)ಮತ್ತೊಂದೆಡೆ ಇನಿಂಗ್ಸ್ ಆಧರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅಮೋಲ್‌ಪ್ರೀತ್ ಸಿಂಗ್(11)ಉತ್ತಮ ಆರಂಭವನ್ನು ಬಳಸಿಕೊಳ್ಳಲು ವಿಫಲರಾದಾಗ ಪಂಜಾಬ್ 55 ರನ್‌ಗೆ 3ನೇ ವಿಕೆಟ್ ಕಳೆದುಕೊಂಡಿತು.

ಗುರುಕೀರತ್ ಸಿಂಗ್(44,32 ಎಸೆತ,2 ಬೌಂಡರಿ,3 ಸಿಕ್ಸರ್)ನಾಯಕ ಸಿಂಗ್ ಜೊತೆ ಕೈಜೋಡಿಸಿ ನಾಲ್ಕನೇ ವಿಕೆಟ್‌ಗೆ ನಿರ್ಣಾಯಕ 88 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಮನ್‌ದೀಪ್ 50 ಎಸೆತಗಳಲ್ಲಿ 9 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಗುರುಕೀರತ್ 32 ಎಸೆತಗಳಲ್ಲಿ 2 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ಸಹಿತ 44 ರನ್ ಗಳಿಸಿದ್ದಾರೆ. ಗೆಲ್ಲಲು 164 ರನ್ ಗುರಿ ಪಡೆದ ಕರ್ನಾಟಕ ತಂಡ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್(2)ವಿಕೆಟನ್ನು ಬೇಗನೆ ಕಳೆದುಕೊಂಡಿತು. ರಾಹುಲ್ ಆಕ್ರಮಣಕಾರಿ ಆಟದ ಮೂಲಕ ಎದುರಾಳಿಯ ವೇಗದ ಹಾಗೂ ಸ್ಪಿನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.ರೋಹನ್ ಕದಂ(23) ಹಾಗೂ ನಾಯಕ ಮನೀಷ್ ಪಾಂಡೆ(33)ಅಮೂಲ್ಯ ಕೊಡುಗೆ ನೀಡಿದರು. ರಾಹುಲ್ ಹಾಗೂ ಕರುಣ್ ನಾಯರ್(ಔಟಾಗದೆ 23, 11 ಎಸೆತ, 2 ಬೌಂಡರಿ, 2 ಸಿಕ್ಸರ್)ಗೆಲುವಿನ ವಿಧಿವಿಧಾನ ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News