ಆಝಂ ಶತಕ ವ್ಯರ್ಥ, ಪಾಕಿಸ್ತಾನವನ್ನು ಮಣಿಸಿದ ಆಸ್ಟ್ರೇಲಿಯ

Update: 2019-11-24 18:00 GMT

ಬ್ರಿಸ್ಬೇನ್, ನ.24: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 5 ರನ್‌ಗಳ ಅಂತರದಿಂದ ಗೆದ್ದುಕೊಂಡಿರುವ ಆಸ್ಟ್ರೇಲಿಯ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

3 ವಿಕೆಟ್ ನಷ್ಟಕ್ಕೆ 64 ರನ್‌ನಿಂದ ಎರಡನೇ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಬಾಬರ್ ಆಝಂ ಶತಕ(104, 173 ಎಸೆತ, 13 ಬೌಂಡರಿ)ಹಾಗೂ ಮುಹಮ್ಮದ್ ರಿಝ್ವ್‌ನ್ ಅರ್ಧಶತಕ(95,145 ಎಸೆತ, 10 ಬೌಂಡರಿ)ಹೊರತಾಗಿಯೂ 84.2 ಓವರ್‌ಗಳಲ್ಲಿ 335 ರನ್ ಗಳಿಸಿ ಆಲೌಟಾಯಿತು.

ಆಝಂ ಆಕರ್ಷಕ ಶತಕ ಗಳಿಸಿದರೆ, ರಿಝ್ವನ್ ಕೇವಲ ಐದು ರನ್‌ನಿಂದ ಶತಕ ವಂಚಿತರಾದರು. ಲೆಗ್ ಸ್ಪಿನ್ನರ್ ಯಾಸಿರ್ ಶಾ ಟೆಸ್ಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್(42 ರನ್)ಗಳಿಸಿದ್ದಾರೆ.

ಆಸ್ಟ್ರೇಲಿಯದ ಪರ ಜೋಶ್ ಹೇಝಲ್‌ವುಡ್(4-63)ಯಶಸ್ವಿ ಬೌಲರ್ ಎನಿಸಿಕೊಂಡರು. ಮಿಚೆಲ್ ಸ್ಟಾರ್ಕ್(3-73), ಪ್ಯಾಟ್ ಕಮಿನ್ಸ್(2-69) ಹಾಗೂ ನಥಾನ್ ಲಿಯೊನ್(1-74)ಪಾಕಿಸ್ತಾನಕ್ಕೆ ಇನಿಂಗ್ಸ್ ಅಂತರದ ಸೋಲುಣಿಸಲು ಕಾರಣರಾದರು.

ಇದಕ್ಕೂ ಮೊದಲು ಆಝಂ ಟೆಸ್ಟ್ ನಲ್ಲಿ ಎರಡನೇ ಹಾಗೂ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಶತಕವನ್ನು ಗಳಿಸಿ ಒಂದಷ್ಟು ಪ್ರತಿರೋಧ ಒಡ್ಡಿದರು. ಪಾಕ್ ಪಂದ್ಯವನ್ನು ಸೋತ ಕಾರಣ ಆಝಂ ಪ್ರಯತ್ನ ವ್ಯರ್ಥವಾಯಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ ಒಂದು ರನ್ ಗಳಿಸಿದ್ದ ಆಝಂ 2ನೇ ಇನಿಂಗ್ಸ್‌ನಲ್ಲಿ ಸಂಪೂರ್ಣ ಭಿನ್ನ ಆಟಗಾರನಾಗಿ ಕಾಣಿಸಿಕೊಂಡರು. ನಥಾನ್ ಲಿಯೊನ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಟಿಮ್ ಪೈನ್‌ಗೆ ವಿಕೆಟ್ ಒಪ್ಪಿಸುವ ಮೊದಲು 104 ರನ್ ಗಳಿಸಿದರು.

ಆಝಂ ಔಟಾಗುವ ಮೊದಲು ಶಾನ್ ಮಸೂದ್‌ರೊಂದಿಗೆ 4ನೇ ವಿಕೆಟ್‌ಗೆ 68 ರನ್ ಹಾಗೂ ರಿಝ್ವನ್‌ರೊಂದಿಗೆ 7ನೇ ವಿಕೆಟ್‌ಗೆ 132 ರನ್ ಜೊತೆಯಾಟದಲ್ಲಿ ಭಾಗಿಯಾದರು. ಪಾಕ್ 25 ರನ್‌ಗೆ 3 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಜೊತೆಯಾದ ಆರಂಭಿಕ ಬ್ಯಾಟ್ಸ್‌ಮನ್ ಮಸೂದ್(42) ಹಾಗೂ ಆಝಂ ತಂಡವನ್ನು ಆಧರಿಸಿದರು. ಕೇವಲ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಿಝ್ವಿನ್ 86 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಇದರಲ್ಲಿ 9 ಬೌಂಡರಿಗಳಿದ್ದವು. ನೈಜ ಬದ್ಧತೆಯೊಂದಿಗೆ ಆಡಿದ ರಿಝ್ವಿನ್ ಅವರು ಹೇಝಲ್‌ವುಡ್ ಶಾರ್ಟ್‌ಬಾಲ್‌ನ್ನು ಕೆಣಕಲು ಹೋಗಿ ಲಿಯೊನ್‌ಗೆ ಕ್ಯಾಚ್ ನೀಡಿದರು. ಕೇವಲ 5 ರನ್‌ನಿಂದ ಚೊಚ್ಚಲ ಶತಕದಿಂದ ವಂಚಿತರಾದರು.ರಿಝ್ವಾನ್ ಔಟಾಗುವುದರೊಂದಿಗೆ ಪಾಕ್‌ನ ಪ್ರತಿರೋಧ ಕೊನೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News