ಧೋನಿ ದಾಖಲೆ ಮುರಿದ ವಿರಾಟ್ ಕೊಹ್ಲಿ

Update: 2019-11-24 18:02 GMT

ಕೋಲ್ಕತಾ, ನ.24: ಸತತ ಏಳು ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತದ ಮೊದಲ ನಾಯಕನೆಂಬ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ರವಿವಾರ ಈಡನ್‌ಗಾರ್ಡನ್ಸ್ ನಲ್ಲಿ ನಡೆದ ಡೇ-ನೈಟ್ ಟೆಸ್ಟ್ ನ ಮೂರನೇ ದಿನದಾಟದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ಇನಿಂಗ್ಸ್ ಹಾಗೂ 46 ರನ್‌ಗಳ ಅಂತರದಿಂದ ಮಣಿಸಿದ ಬಳಿಕ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

ಈ ಮೂಲಕ ಕೊಹ್ಲಿ ಮಾಜಿ ನಾಯಕ ಎಂಎಸ್ ಧೋನಿ ಹೆಸರಲ್ಲಿದ್ದ ಗರಿಷ್ಠ ಟೆಸ್ಟ್ ಪಂದ್ಯಗಳ ಗೆಲುವಿನ ದಾಖಲೆಯೊಂದನ್ನು ಮುರಿದರು. ಧೋನಿ ನಾಯಕತ್ವದಲ್ಲಿ ಭಾರತ 2013ರಲ್ಲಿ ಸತತ ಆರು ಟೆಸ್ಟ್ ಪಂದ್ಯಗಳಲ್ಲಿ ಜಯಭೇರಿ ಬಾರಿಸಿತ್ತು.

ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭರ್ಜರಿ ಜಯ ಸಾಧಿಸಿರುವ ಭಾರತ ಮತ್ತೊಂದು ದಾಖಲೆಯನ್ನು ನಿರ್ಮಿಸಿತು. ಇನಿಂಗ್ಸ್ ಅಂತರದಲ್ಲಿ ಸತತ 4 ಪಂದ್ಯಗಳಲ್ಲಿ ಜಯ ಸಾಧಿಸಿದ ದಾಖಲೆ ನಿರ್ಮಿಸಿತು.

ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ ಸತತ ಎರಡನೇ ಜಯ ದಾಖಲಿಸಿರುವ ಭಾರತದ ಪರ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್‌ಗಳು ಒಂದೂ ವಿಕೆಟನ್ನು ಪಡೆದಿಲ್ಲ. 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲೂ ಸ್ಪಿನ್ನರ್‌ಗಳಿಗೆ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿರುವ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 7 ಪಂದ್ಯಗಳಲ್ಲಿ 360 ಅಂಕವನ್ನು ಕಲೆಹಾಕಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇಂದು ಭಾರತ ತಂಡ ಸತತ ಐದನೇ ಟೆಸ್ಟ್ ಸರಣಿ ವಶಪಡಿಸಿಕೊಂಡಿದ್ದು, ಸ್ವದೇಶದಲ್ಲಿ ದಾಖಲಿಸಿದ 12ನೇ ಸರಣಿ ಗೆಲುವು ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News