ನಡಾಲ್ ಸಾರಥ್ಯದಲ್ಲಿ ಸ್ಪೇನ್‌ಗೆ 6ನೇ ಬಾರಿ ಡೇವಿಸ್ ಕಪ್

Update: 2019-11-25 18:16 GMT

ಮ್ಯಾಡ್ರಿಡ್, ನ.25: ಸ್ಪೇನ್‌ಗೆ ಆರನೇ ಡೇವಿಸ್ ಕಪ್ ಪ್ರಶಸ್ತಿ ಗೆದ್ದುಕೊಟ್ಟಿರುವ ರಫೆಲ್ ನಡಾಲ್ ತನ್ನ ಯಶಸ್ವಿ ವರ್ಷಕ್ಕೆ ಅಂತಿಮ ಸ್ಪರ್ಶ ನೀಡಿದರು. ರವಿವಾರ ನಡೆದ ಪಂದ್ಯದಲ್ಲಿ ಕೆನಡಾದ ಡೆನಿಸ್ ಶಪೊವಾಲೊವ್‌ರನ್ನು ಮಣಿಸಿದ ನಡಾಲ್ ಸ್ಪೇನ್‌ಗೆ ಪ್ರಶಸ್ತಿ ತಂದುಕೊಟ್ಟರು.

ತವರು ಮೈದಾನದಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನಡಾಲ್ ಅವರು ಶಪೊವಾಲೊವ್‌ರನ್ನು 6-3, 7-6(9/7)ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಸ್ಪೇನ್‌ಗೆ 2-0 ಮುನ್ನಡೆ ಒದಗಿಸಿಕೊಟ್ಟರು. 2017ರಲ್ಲಿ ಕೆನಡಾ ಮಾಸ್ಟರ್ಸ್ ನಲ್ಲಿ ನಡಾಲ್ ವಿರುದ್ಧ ಆಡಿದ್ದ ಮೊದಲ ಪಂದ್ಯವನ್ನು ಜಯಿಸಿ ಗಮನ ಸೆಳೆದಿದ್ದ ಶಪೊವಾಲೊವ್ ಡೇವಿಸ್ ಕಪ್ ಪಂದ್ಯದಲ್ಲಿ ಯಾವ ಹಂತದಲ್ಲೂ ಹೋರಾಟವನ್ನು ನೀಡಲಿಲ್ಲ.

ಇದಕ್ಕೂ ಮೊದಲು ನಡೆದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ರಾಬರ್ಟೊ ಬೌಟಿಸ್ಟಾ ಅಗುಟ್ ಅವರು ಫೆಲಿಕ್ಸ್ ಅಗೆರ್-ಅಲಿಯಸ್ಸಿಮ್‌ರನ್ನು 7-6(7/3), 6-3 ಅಂತರದಿಂದ ಸೋಲಿಸಿದರು.

‘‘2019ನೇ ಋತುವನ್ನು ಪ್ರಶಸ್ತಿಯೊಂದಿಗೆ ಕೊನೆಗೊಳಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ’’ ಎಂದು ಪಂದ್ಯದ ಬಳಿಕ ನಡಾಲ್ ಪ್ರತಿಕ್ರಿಯಿಸಿದರು. ಶನಿವಾರ ನಡೆದ ಬ್ರಿಟನ್ ವಿರುದ್ಧ ಸೆಮಿ ಫೈನಲ್‌ನಲ್ಲಿ 33ರ ಹರೆಯದ ನಡಾಲ್ ನೇತೃತ್ವದಲ್ಲಿ ಸ್ಪೇನ್ ಉತ್ತಮ ಪ್ರದರ್ಶನ ನೀಡಿದೆ. ನಡಾಲ್ ಅವರು ನಾಲ್ಕನೇ ಬಾರಿ ಡೇವಿಸ್ ಕಪ್ ಫೈನಲ್‌ನಲ್ಲಿ ಯಶಸ್ಸು ಸಾಧಿಸಿದ್ದಾರೆ. 2004, 2009ಹಾಗೂ 2011ರಲ್ಲಿ ಪ್ರಶಸ್ತಿ ಜಯಿಸಿರುವ ನಡಾಲ್ ರೋಜರ್ ಫೆಡರರ್‌ಗಿಂತ ಮೂರು ಪ್ರಶಸ್ತಿ ಜಾಸ್ತಿ ಗೆದ್ದಿದ್ದಾರೆ. ಈ ವರ್ಷ ನಡಾಲ್ ಫ್ರೆಂಚ್ ಓಪನ್ ಹಾಗೂ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದಲ್ಲದೆ ವಿಶ್ವದ ನಂ.1 ಆಟಗಾರನಾಗಿ ಈ ವರ್ಷವನ್ನು ಅಂತ್ಯಗೊಳಿಸಿದ್ದಾರೆ.

ನಡಾಲ್ ನೇತೃತ್ವದ ಸ್ಪೇನ್ ತಂಡ 2.1 ಮಿಲಿಯನ್ ಡಾಲರ್ ಚೆಕ್‌ನ್ನು ಜೇಬಿಗಿಳಿಸಿಕೊಂಡಿದೆ. ನಡಾಲ್ ಈ ವಾರ ನಡೆದ 8ಕ್ಕೆ 8 ಪಂದ್ಯಗಲ್ಲಿ ಜಯ ಸಾಧಿಸುವ ಮೂಲಕ ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News