ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ : ಕರ್ನಾಟಕವನ್ನು ಮಣಿಸಿದ ಮುಂಬೈ

Update: 2019-11-25 18:17 GMT

ಸೂರತ್, ನ.25: ನಾಯಕ ಸೂರ್ಯಕುಮಾರ್‌ಯಾದವ್ ಅವರ (ಔಟಾಗದೆ 94)ಭರ್ಜರಿ ಅರ್ಧಶತಕದ ಕೊಡುಗೆ ನೆರವಿನಿಂದ ಮುಂಬೈ ತಂಡ ಹಾಲಿ ಚಾಂಪಿಯನ್ ಕರ್ನಾಟಕ ತಂಡವನ್ನು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ‘ಬಿ’ ಗುಂಪಿನ ಸೂಪರ್ ಲೀಗ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಅಂತರದಿಂದ ಮಣಿಸಿದೆ.

ಮುಂಬೈ 172 ರನ್ ಗುರಿಯನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿದ್ದು,ಉತ್ತಮ ಫಾರ್ಮ್ ನಲ್ಲಿರುವ ಸೂರ್ಯ ಏಕಾಂಗಿ ಹೋರಾಟ ನೀಡಿ ದೇಶೀಯ ಕ್ರಿಕೆಟ್‌ನ ದೈತ್ಯ ತಂಡವನ್ನು ಒಂದು ಓವರ್ ಬಾಕಿ ಇರುವಾಗಲೇ ಗೆಲುವಿನ ದಡ ಸೇರಿಸಿದರು.

 ಮುಂಬೈ 44 ರನ್‌ಗೆ 2 ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗೆ ಇಳಿದ ಸೂರ್ಯ(ಔಟಾಗದೆ 94, 53 ಎಸೆತ, 11 ಬೌಂಡರಿ,4 ಸಿಕ್ಸರ್)ತಂಡಕ್ಕೆ ಆಸರೆಯಾದರು. ಆರಂಭಿಕ ಬ್ಯಾಟ್ಸ್ ಮನ್‌ಗಳಾದ ಆದಿತ್ಯ ತಾರೆ(12) ಹಾಗೂ ಪೃಥ್ವಿ ಶಾ(30) ವಿಕೆಟ್ ಒಪ್ಪಿಸಿದಾಗ ಮುಂಬೈಗೆ ಗೆಲ್ಲಲು 100ಕ್ಕೂ ಅಧಿಕ ರನ್ ಅಗತ್ಯವಿತ್ತು.

ಶ್ರೇಯಸ್ ಅಯ್ಯರ್(14) ಅವರೊಂದಿಗೆ ಮೂರನೇ ವಿಕೆಟ್‌ಗೆ 46 ರನ್ ಜೊತೆಯಾಟ ನಡೆಸಿದ ಆಕ್ರಮಣಕಾರಿ ಬಲಗೈ ದಾಂಡಿಗ ಸೂರ್ಯ ಇನಿಂಗ್ಸ್‌ಗೆ ಜೀವ ತುಂಬಿದರು. 11ನೇ ಓವರ್‌ನಲ್ಲಿ ಅಯ್ಯರ್‌ಗೆ ಪೆವಿಲಿಯನ್ ಹಾದಿ ತೋರಿಸಿದ ಕರ್ನಾಟಕ ತಿರುಗೇಟು ನೀಡಿತು. ಅಯ್ಯರ್ ನಿರ್ಗಮನದ ಬಳಿಕ ಸೂರ್ಯ ತನ್ನ ಪ್ರತಾಪ ತೋರಿದರು. ಸಿ.ಬಿ. ಪಟೇಲ್ ಮೈದಾನದಲ್ಲಿ ಕರ್ನಾಟಕದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. 53 ಎಸೆತಗಳಲ್ಲಿ 94 ರನ್ ಗಳಿಸಿದ ಸೂರ್ಯ 11 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಸಿಡಿಸಿದರು.ಈ ಮೂಲಕ ಆಯ್ಕೆಗಾರರ ಮನ ಗೆದ್ದಿದ್ದಾರೆ.

ಮುಂಬೈ ನಾಯಕ ಸೂರ್ಯ ಆಲ್‌ರೌಂಡರ್ ಶಿವಂ ದುಬೆ(ಔಟಾಗದೆ 22, 18 ಎಸೆತ)ಜೊತೆಗೆ ನಾಲ್ಕನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 84 ರನ್ ಸೇರಿಸಿ ತಂಡಕ್ಕೆ ಭರ್ಜರಿ ಜಯ ತಂದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ತಂಡ ಕೆ.ಎಲ್. ರಾಹುಲ್(0) ಹಾಗೂ ನಾಯಕ ಮನೀಷ್ ಪಾಂಡೆ(4) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿದ್ದರೂ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಲು ಶಕ್ತವಾಯಿತು.

ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್(57ರನ್, 34 ಎಸೆತ, 4 ಬೌಂಡರಿ,4 ಸಿಕ್ಸರ್)ರೋಹನ್ ಕದಂ(71 ರನ್, 41 ಎಸೆತ, 7 ಬೌಂಡರಿ,3 ಸಿಕ್ಸರ್)ಜೊತೆಗೆ ಸೇರಿ ಕರ್ನಾಟಕ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

ಮುಂಬೈ ಪರವಾಗಿ ವೇಗಿಗಳಾದ ಶಾರ್ದೂಲ್ ಠಾಕೂರ್(2-29), ಶಿವಂ ದುಬೆ(2-39) ಹಾಗೂ ಎಡಗೈ ಸ್ಪಿನ್ನರ್ ಶಂಸ್ ಮುಲಾನಿ(1-8)ಐದು ವಿಕೆಟ್‌ಗಳನ್ನು ಹಂಚಿಕೊಂಡರು. ಇದು ಟೂರ್ನಮೆಂಟ್‌ನ ಸೂಪರ್ ಲೀಗ್‌ನಲ್ಲಿ ಕರ್ನಾಟಕ ಕಂಡ ಮೊದಲ ಸೋಲಾಗಿದೆ. ಕರ್ನಾಟಕ 4ನೇ ಪಂದ್ಯದಲ್ಲಿ ಸೋಲುವ ಮೊದಲು ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಸೂಪರ್ ಲೀಗ್ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News