ಜೋಫ್ರಾ ಆರ್ಚರ್‌ಗೆ ಜನಾಂಗೀಯ ನಿಂದನೆ: ನ್ಯೂಝಿಲ್ಯಾಂಡ್ ಕ್ರಿಕೆಟ್ ಕ್ಷಮೆಯಾಚನೆ

Update: 2019-11-26 17:56 GMT

ವೆಲ್ಲಿಂಗ್ಟನ್, ನ.26: ಇಂಗ್ಲೆಂಡ್‌ನ ವೇಗದ ಬೌಲರ್ ಜೋಫ್ರಾ ಆರ್ಚರ್ ತಂಗಿರುವ ಹೊಟೇಲ್‌ಗೆ ತೆರಳಿದ ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಡೇವಿಡ್ ವೈಟ್ ಜನಾಂಗೀಯ ನಿಂದನೆಗೆ ಸಂಬಂಧಿಸಿ ಕ್ಷಮೆಯಾಚಿಸಿದರು.

ಮೊದಲ ಟೆಸ್ಟ್ ಪಂದ್ಯ ನಡೆದ ಬೇ ಓವಲ್ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಪ್ರೇಕ್ಷಕರು ತನಗೆ ಜನಾಂಗೀಯ ನಿಂದನೆ ಮಾಡಿದ್ದರು ಎಂದು ಜೋಫ್ರಾ ಆರೋಪಿಸಿದ್ದರು. ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿಯು ಈ ಕುರಿತು ಸೋಮವಾರ ತನಿಖೆ ಆರಂಭಿಸಿದ್ದವು.

ಆರ್ಚರ್‌ಗೆ ಹೆಚ್ಚುವರಿ ಭದ್ರತೆಯ ಭರವಸೆ ನೀಡಿದ್ದೇವೆ. ಶುಕ್ರವಾರ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಈ ಅಹಿತಕರ ಘಟನೆ ಪುನರಾವರ್ತನೆಯಾಗುವುದಿಲ್ಲ ಎಂದು ವೈಟ್ ಹೇಳಿದ್ದಾರೆ.

ನಾನು ಅವರೊಂದಿಗೆ ಮಾತನಾಡಿದ್ದೇನೆ. ನಮ್ಮ ದೇಶದಲ್ಲಿ ಇಂತಹ ಅನುಭವ ಎದುರಿಸಿದ್ದಕ್ಕೆ ಅವರ ಬಳಿ ನಾನು ಕ್ಷಮೆ ಕೇಳಿದ್ದೇನೆ. ನಮಗೆ ಈ ಘಟನೆಯು ನಿರಾಸೆವುಂಟು ಮಾಡಿದೆ ಎಂದು ವೈಟ್ ತಿಳಿಸಿದ್ದಾರೆ.

ವೆಸ್ಟ್‌ಇಂಡೀಸ್‌ನ ಬಾರ್ಬಡೊಸ್‌ನಲ್ಲಿ ಹುಟ್ಟಿರುವ ಆರ್ಚರ್ ಅಂಡರ್-19 ವಯೋಮಿತಿಯ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್‌ನ್ನು ಪ್ರತಿನಿಧಿಸಿದ್ದರು. ನ್ಯೂಝಿಲ್ಯಾಂಡ್ ವಿರುದ್ಧ ಸೋಮವಾರ ಕೊನೆಗೊಂಡ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 30 ರನ್ ಗಳಿಸಿದ್ದ ಆರ್ಚರ್ ಇಂಗ್ಲೆಂಡ್ ಸೋಲಿನ ಅಂತರ ಕುಗ್ಗಿಸಲು ಯತ್ನಿಸಿದ್ದಾರೆ.

ಪ್ರೇಕ್ಷಕರ ಗುಂಪಿನಲ್ಲಿದ್ದ ಓರ್ವ ವ್ಯಕ್ತಿಯ ಬಾಯಿಂದ ಜನಾಂಗೀಯ ನಿಂದನೆ ಕೇಳಿಬಂದಾಗ ಸ್ವಲ್ಪ ವಿಚಲಿತನಾಗಿದ್ದೆ ಎಂದು 24ರ ಹರೆಯದ ಆರ್ಚರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಜನಾಂಗೀಯ ನಿಂದನೆ ಮಾಡಿರುವ ವ್ಯಕ್ತಿಯ ಪರಿಚಯ ಪತ್ತೆಯಾದರೆ ಆತನಿಗೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸದಂತೆ ಆಜೀವ ನಿಷೇಧ ಹೇರಲಾಗುವುದು. ನಮ್ಮ ತಂಡ ಬೇ ಓವಲ್ ತಂಡ ದೊಂದಿಗೆ ಕೆಲಸ ಮಾಡುತ್ತಿದ್ದು, ಸೆಕ್ಯುರಿಟಿ ಫುಟೇಜ್‌ನ ಮೂಲಕ ಅಗತ್ಯವಿರುವ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಮುಂದಿನ ಕೆಲವೇ ದಿನಗಳಲ್ಲಿ ಆ ವ್ಯಕ್ತಿಯನ್ನು ಪತ್ತೆಹಚ್ಚುವ ವಿಶ್ವಾಸದಲ್ಲಿದ್ದೇವೆ ಎಂದು ವೈಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News