ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರಸ್ಥಾನದತ್ತ ವಿರಾಟ್ ಕೊಹ್ಲಿ

Update: 2019-11-26 17:57 GMT

ದುಬೈ, ನ.26: ಬಾಂಗ್ಲಾದೇಶ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ನಂ.1 ಸ್ಥಾನ ವಶಪಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇದೇ ವೇಳೆ, ಭಾರತದ ಆರಂಭಿಕ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ವಾಲ್ ಇದೇ ಮೊದಲ ಬಾರಿ ಅಗ್ರ-10ರಲ್ಲಿ ಪ್ರವೇಶಗಿಟ್ಟಿಸಿಕೊಂಡಿದ್ದಾರೆ.

ಕೋಲ್ಕತಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 136 ರನ್ ಗಳಿಸಿದ್ದು, ಒಟ್ಟು 928 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ. ನಂ.1 ಸ್ಥಾನದಲ್ಲಿರುವ ಆಸ್ಟ್ರೇಲಿಯದ ಸ್ಟೀವ್ ಸ್ಮಿತ್‌ರಿಂದ 25 ಅಂಕ ಅಂತರ ಹೊಂದಿದ್ದ ಕೊಹ್ಲಿಗೆ ಸ್ಮಿತ್‌ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ಈಗ ಕೇವಲ ಮೂರಂಕದ ಅಗತ್ಯವಿದೆ. ಕೊಹ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಇಂದೋರ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ್ದ ಅಗರ್ವಾಲ್ ಒಟ್ಟು 700 ಅಂಕ ಗಳಿಸಿ ಒಂದು ಸ್ಥಾನ ಭಡ್ತಿ ಪಡೆದು 10ನೇ ಸ್ಥಾನಕ್ಕೇರಿದರು. ಮಾಯಾಂಕ್ ಅಗ್ರ-10ರಲ್ಲಿ ಸ್ಥಾನ ಪಡೆದಿರುವ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್. ಚೇತೇಶ್ವರ ಪೂಜಾರ(791) ಹಾಗೂ ಅಜಿಂಕ್ಯ ರಹಾನೆ(759)ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 91 ಹಾಗೂ 28 ರನ್ ಗಳಿಸಿದ್ದ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮೂರು ಸ್ಥಾನ ಮೇಲಕ್ಕೇರಿ ಮೊದಲ ಬಾರಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

ಕೋಲ್ಕತಾ ಟೆಸ್ಟ್‌ನ ದ್ವಿತೀಯ ಇನಿಂಗ್ಸ್ ನಲ್ಲಿ ಹೋರಾಟಕಾರಿ 74 ರನ್ ಗಳಿಸಿದ್ದ ಬಾಂಗ್ಲಾದೇಶದ ಮುಶ್ಫಿಕುರ್ರಹೀಂ ನಾಲ್ಕು ಸ್ಥಾನ ಭಡ್ತಿ ಪಡೆದು 26ನೇ ಸ್ಥಾನ ತಲುಪಿದ್ದಾರೆ. ಲಿಟನ್ ದಾಸ್ 8 ಸ್ಥಾನ ಭಡ್ತಿ ಪಡೆದು 78ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಲು ನೆರವಾಗಿದ್ದ ವೇಗದ ಬೌಲರ್‌ಗಳಾದ ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ಜೀವನಶ್ರೇಷ್ಠ ಅಂಕ ಗಳಿಸಿದ್ದಾರೆ. 716 ಅಂಕ ಗಳಿಸಿರುವ ಇಶಾಂತ್ 17ನೇ ಸ್ಥಾನದಲ್ಲಿದ್ದಾರೆ. 2011ರ ಜುಲೈನಲ್ಲಿ ಜೀವನಶ್ರೇಷ್ಠ ಏಳನೇ ಸ್ಥಾನಕ್ಕೇರಿದ್ದಾರೆ. 672 ಅಂಕ ಗಳಿಸಿರುವ ಉಮೇಶ್ ಒಂದು ಸ್ಥಾನ ಮೇಲಕ್ಕೇರಿ 21ನೇ ಸ್ಥಾನ ತಲುಪಿದ್ದಾರೆ. 772 ಅಂಕ ಗಳಿಸಿರುವ ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒಂದು ಸ್ಥಾನ ಮೇಲಕ್ಕೇರಿ 9ನೇ ಸ್ಥಾನ ತಲುಪಿದ್ದಾರೆ. ಗಾಯದ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರ ಸರಿದಿರುವ ಜಸ್‌ಪ್ರೀತ್ ಬುಮ್ರಾ ಒಂದು ಸ್ಥಾನ ಕಳೆದುಕೊಂಡು 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ 725 ಅಂಕ ಗಳಿಸಿ ಒಂದು ಸ್ಥಾನ ಭಡ್ತಿ ಪಡೆದು 15ನೇ ಸ್ಥಾನದಲ್ಲಿರುವ ಜಡೇಜ ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವೆಸ್ಟ್‌ಇಂಡೀಸ್‌ನ ಜೇಸನ್ ಹೋಲ್ಡರ್ ನಂ.1 ಸ್ಥಾನದಲ್ಲಿದ್ದಾರೆ. ಆರ್.ಅಶ್ವಿನ್ ಒಂದು ಸ್ಥಾನ ಕಳೆದುಕೊಂಡು 5ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News