ಪಿಬಿಎಲ್ ಹರಾಜು: ಪಿ.ವಿ. ಸಿಂಧು, ತೈ ತ್ಸು ಯಿಂಗ್‌ಗೆ ಜಾಕ್‌ಪಾಟ್

Update: 2019-11-26 17:59 GMT

ಹೊಸದಿಲ್ಲಿ, ನ.26: ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ (ಪಿಬಿಎಲ್) ಐದನೇ ಆವೃತ್ತಿಯ ಹರಾಜಿನಲ್ಲಿ ಮಂಗಳವಾರ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಅವರನ್ನು 77 ಲಕ್ಷ ರೂ.ಗೆ ಹೈದರಾಬಾದ್ ಹಂಟರ್ಸ್ ತಂಡ ಉಳಿಸಿಕೊಂಡಿದೆ. ಇದೇ ವೇಳೆ ವಿಶ್ವ ನಂಬರ್ 1 ಸಿಂಗಲ್ಸ್ ಆಟಗಾರ್ತಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಅವರನ್ನು ಅಷ್ಟೇ ಮೊತ್ತಕ್ಕೆ ಅಂದರೆ 77 ಲಕ್ಷ ರೂ. ಗೆ ಹಾಲಿ ಚಾಂಪಿಯನ್ ಬೆಂಗಳೂರು ರಾಪ್ಟರ್ಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ತೈ ತ್ಸು ಯಿಂಗ್ ಅವರನ್ನು ಪುಣೆ ಸೆವೆನ್ ಏಸಸ್ ಸೆಳೆದುಕೊಳ್ಳಲು ಪ್ರಯತ್ನ ನಡೆಸಿದ್ದರೂ ಅದರ ಪ್ರಯತ್ನ ಫಲಕಾರಿಯಾಗಲಿಲ್ಲ.

 ಭಾರತದ ಮತ್ತೊಬ್ಬ ಪ್ರಮುಖ ಆಟಗಾರ ಬಿ. ಸಾಯಿ ಪ್ರಣೀತ್ ಅವರನ್ನು ಬೆಂಗಳೂರು ರಾಪ್ಟರ್ಸ್ ತಂಡ 32 ಲಕ್ಷ ರೂ.ಗಳಿಗೆ ತನ್ನಲ್ಲೇ ಉಳಿಸಿಕೊಂಡಿದೆ.

ಆಯಾ ಫ್ರಾಂಚೈಸಿಗಳು ಉಳಿಸಿ ಕೊಂಡಿರುವ ಭಾರತದ ಪುರುಷರ ಡಬಲ್ಸ್ ಆಟಗಾರರ ಪೈಕಿ ಬಿ. ಸುಮೀತ್ ರೆಡ್ಡಿ (ಚೆನ್ನೈ ಸೂಪರ್‌ಸ್ಟಾರ್ಝ್ 11 ಲಕ್ಷ ರೂ.) ಮತ್ತು ಚಿರಾಗ್ ಶೆಟ್ಟಿ (ಪುಣೆ 7ಏಸಸ್ 15.50 ಲಕ್ಷ ರೂ.) ಸೇರಿದ್ದಾರೆ.

ವಿಶ್ವದ 9ನೇ ಕ್ರಮಾಂಕದ ಅಮೆರಿಕದ ಮಹಿಳಾ ಸಿಂಗಲ್ಸ್ ಆಟಗಾರ್ತಿ ಬೀವಾನ್ ಜಾಂಗ್ ಅವರನ್ನು ಅವಧ್ ವಾರಿಯರ್ಸ್ 39 ಲಕ್ಷ ರೂ.ಗೆ ಖರೀದಿಸಿದೆ.

ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತು ದಾರ ಪುಲ್ಲೇಲಾ ಗೋಪಿಚಂದ್ ಅವರ ಪುತ್ರಿ ಗಾಯತ್ರಿ ಗೋಪಿಚಂದ್ ಅವರನ್ನು ಚೆನ್ನೈ ಸೂಪಸ್ಟಾರ್ಜ್ ಸೆಳೆದುಕೊಂಡರೆ, ಅಸ್ಸಾಂನ ಯುವ ಶಟ್ಲರ್ ಅಶ್ಮಿತಾ ಚಲಿಹಾ ಅವರನ್ನು ತನ್ನ ತವರು ತಂಡ ನಾರ್ತ್ ಈಸ್ಟರ್ನ್ ವಾರಿಯರ್ಸ್ 3 ಲಕ್ಷ ರೂ.ಗೆ ಖರೀದಿಸಿತು.

 ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ಕೆ. ಶ್ರೀಕಾಂತ್ ತಮ್ಮ ಅಂತರ್‌ರಾಷ್ಟ್ರೀಯ ವೃತ್ತಿಜೀವನದತ್ತ ಗಮನ ಹರಿಸುವ ಉದ್ದೇಶಕ್ಕಾಗಿ ಪಿಬಿಎಲ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಕಳೆದ ಪಿಬಿಎಲ್‌ನಲ್ಲಿ ನಾರ್ತ್ ಈಸ್ಟರ್ನ್ ವಾರಿಯರ್ಸ್ ಪರ ಆಡಿದ್ದ ಸೈನಾ ಅವರು ಮುಂದಿನ ಅಂತರ್‌ರಾಷ್ಟ್ರೀಯ ಟೂರ್ನಿಗೆ ತನ್ನನ್ನು ಸಿದ್ಧಪಡಿಸಿಕೊಳ್ಳಲು 2020ರ ಈವೆಂಟ್‌ನಿಂದ ಹೊರಗುಳಿದಿದ್ದರೆ, ಶ್ರೀಕಾಂತ್ 2020 ರ ಟೋಕಿಯೊ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಅಂತರ್‌ರಾಷ್ಟ್ರೀಯ ಟೂರ್ನಿಗಳತ್ತ ಗಮನ ಹರಿಸಲು ಬಯಸಿದ್ದರು.

ಸಾಯಿ ಪ್ರಣೀತ್, ಲಕ್ಷ್ಯ ಸೇನ್ ಮತ್ತು ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೇರಿದಂತೆ 154 ಆಟಗಾರರು ಹರಾಜಿನಲ್ಲಿ ಇದ್ದರು.

ಪಿಬಿಎಲ್‌ನ ಮುಂದಿನ ಆವೃತ್ತಿಯು 2020ರ ಜನವರಿ 20ರಿಂದ ಫೆಬ್ರವರಿ 9 ರವರೆಗೆ ನಡೆಯಲಿದ್ದು, ಒಟ್ಟು 74 ಭಾರತೀಯ ಶಟ್ಲರ್‌ಗಳು ಭಾಗವಹಿಸಲಿದ್ದಾರೆ.

ಕಣದಲ್ಲಿರುವ ಏಳು ತಂಡಗಳು - ಅವಧ್ ವಾರಿಯರ್ಸ್ (ಲಕ್ನೋ), ಬೆಂಗಳೂರು ರಾಪ್ಟರ್ಸ್ (ಬೆಂಗಳೂರು), ಮುಂಬೈ ರಾಕೆಟ್ಸ್ (ಮುಂಬೈ), ಹೈದರಾಬಾದ್ ಹಂಟರ್ಸ್ (ಹೈದರಾಬಾದ್), ಚೆನ್ನೈ ಸೂಪಸ್ಟಾರ್ಝ್ (ಚೆನ್ನೈ), ನಾರ್ತ್ ಈಸ್ಟರ್ನ್ ವಾರಿಯರ್ಸ್ (ಈಶಾನ್ಯ) ಮತ್ತು ಪುಣೆ 7 ಏಸಸ್ (ಪುಣೆ).

ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಲಕ್ನೊದಲ್ಲಿ 21 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಪ್ರತಿ ಫ್ರ್ಯಾಂಚೈಸಿಗಳ 2 ಕೋಟಿ ರೂ.ಇದೆ. ಆದರೆ ಅವರು ಒಬ್ಬ ಆಟಗಾರನಿಗೆ 77 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಲು ಸಾಧ್ಯವಿಲ್ಲ. ಯಾವುದೇ ತಂಡದಲ್ಲಿ 11 ಕ್ಕಿಂತ ಹೆಚ್ಚು ಆಟಾಗರರು ಇರುವಂತಿಲ್ಲ. ಪ್ರತಿಯೊಂದು ತಂಡದಲ್ಲೂ ಗರಿಷ್ಠ ಆರು ವಿದೇಶಿ ಆಟಗಾರರು ಮತ್ತು ಕನಿಷ್ಠ ಮೂರು ಮಹಿಳಾ ಶಟ್ಲರ್‌ಗಳನ್ನು ಸೇರಿಸಿಕೊಳ್ಳಲು ಅವಕಾಶ ಇದೆ. ಪ್ರತಿಯೊಂದು ತಂಡಕ್ಕೂ 5 ಪಂದ್ಯಗಳನ್ನು ಆಡಲು ಅವಕಾಶ ಇದೆ. ಎರಡು ಪುರುಷರ ಸಿಂಗಲ್ಸ್, ಒಂದು ಮಹಿಳಾ ಸಿಂಗಲ್ಸ್, ಒಂದು ಪುರುಷರ ಡಬಲ್ಸ್ ಮತ್ತು ಒಂದು ಮಿಶ್ರ ಡಬಲ್ಸ್ ಪಂದ್ಯಗಳಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News