ಮುಂದಿನ ವರ್ಷದ ಐಪಿಎಲ್ ಬಳಿಕ ಎಂಎಸ್ ಧೋನಿ ವೃತ್ತಿ ಭವಿಷ್ಯ ನಿರ್ಧಾರ

Update: 2019-11-26 18:16 GMT

ಹೊಸದಿಲ್ಲಿ, ನ.26: ಇಂಗ್ಲೆಂಡ್‌ನಲ್ಲಿ ಜುಲೈನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಅಂತ್ಯಗೊಂಡ ಬಳಿಕ ಮಹೇಂದ್ರ ಸಿಂಗ್ ಧೋನಿ ಯಾವುದೇ ಸರಣಿಗೆ ಲಭ್ಯವಿರದೇ ಸ್ವತಃ ನಿರ್ಬಂಧ ವಿಧಿಸಿಕೊಂಡಿದ್ದು, ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಟೂರ್ನಿಯ ಬಳಿಕ ವೃತ್ತಿಜೀವನದ ಕುರಿತು ಸೂಕ್ತ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಬರುವ ಋತುವಿನಲ್ಲಿ ತನ್ನ ವೃತ್ತಿಜೀವನ ಕುರಿತಂತೆ ಸುತ್ತುವರಿದಿರುವ ವದಂತಿಗೆ ತೆರೆ ಎಳೆಯಲಿದ್ದಾರೆ.ಧೋನಿ ಈಗಾಗಲೇ ವೆಸ್ಟ್‌ಇಂಡೀಸ್ ಪ್ರವಾಸ ಹಾಗೂ ಸ್ವದೇಶದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಸರಣಿಯಿಂದ ದೂರ ಉಳಿದಿದ್ದರು.

ಧೋನಿ ಐಪಿಎಲ್ ಬಳಿಕವೇ ತನ್ನ ಭವಿಷ್ಯದ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ಅವರು ಓರ್ವ ಪ್ರಸಿದ್ಧ ಆಟಗಾರನಾಗಿರುವ ಕಾರಣ ಊಹಾಪೋಹಕ್ಕೆ ತಡೆ ಹೇರಲು ಸಾಧ್ಯವಿಲ್ಲ. ಕಳೆದ ಒಂದು ತಿಂಗಳುಗಳಿಂದ ಕಠಿಣ ತರಬೇತಿ ನಡೆಸುತ್ತಿರುವ ಧೋನಿ ಫಿಟ್ನೆಸ್ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

38ರ ಹರೆಯದ ಧೋನಿ ನ್ಯೂಝಿಲ್ಯಾಂಡ್ ವಿರುದ್ಧ ನಡೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೊನೆಯ ಬಾರಿ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ಧೋನಿ ಡಿ.6ರಿಂದ ಆರಂಭವಾಗಲಿರುವ ಮುಂಬರುವ ವೆಸ್ಟ್‌ಇಂಡೀಸ್ ವಿರುದ್ಧ ಸರಣಿಯಿಂದಲೂ ದೂರ ಉಳಿದಿದ್ದಾರೆ. ಟೀಮ್‌ಇಂಡಿಯಾ, ವಿಂಡೀಸ್ ವಿರುದ್ಧ 3 ಪಂದ್ಯಗಳ ಟ್ವೆಂಟಿ-20 ಹಾಗೂ ಏಕದಿನ ಸರಣಿಯನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News