ನೂರಾರು ಬ್ಯಾಂಕ್‌ಗಳು, ಸರಕಾರಿ ಕಟ್ಟಡಗಳಿಗೆ ಬೆಂಕಿ: ಇರಾನ್

Update: 2019-11-27 14:13 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ನ. 27: ಇರಾನ್‌ನಲ್ಲಿ ಇತ್ತೀಚೆಗೆ ನಡೆದ ಸರಕಾರ ವಿರೋಧಿ ಪ್ರತಿಭಟನೆಗಳಲ್ಲಿ ಸುಮಾರು 731 ಬ್ಯಾಂಕ್‌ಗಳು ಮತ್ತು 140 ಸರಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ದೇಶದ ಆಂತರಿಕ ಸಚಿವ ಅಬ್ದುಲ್‌ರಿಝಾ ರಹ್ಮಾನಿ ಫಝ್ಲಿ ಹೇಳಿದ್ದಾರೆ.

ಭದ್ರತಾ ಪಡೆಗಳು ಬಳಸುವ 50ಕ್ಕೂ ಹೆಚ್ಚಿನ ಠಾಣೆಗಳನ್ನು ಧ್ವಂಸಗೊಳಿಸಲಾಗಿದೆ ಹಾಗೂ ಸುಮಾರು 70 ಅನಿಲ ಪಂಪ್‌ಗಳನ್ನು ಸುಟ್ಟು ಹಾಕಲಾಗಿದೆ ಎಂದು ಸಚಿವರು ಹೇಳಿರುವುದಾಗಿ ಆ ದೇಶದ ಅಧಿಕೃತ ಸುದ್ದಿ ಸಂಸ್ಥೆ ‘ಇರ್ನ’ ಬುಧವಾರ ವರದಿ ಮಾಡಿದೆ.

ಆದರೆ, ಈ ದಾಳಿಗಳು ಎಲ್ಲಿ ನಡೆದಿವೆ ಎನ್ನುವುದನ್ನು ಅವರು ಹೇಳಿಲ್ಲ.

 ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳವನ್ನು ಘೋಷಿಸಿದ ಬಳಿಕ, ನವೆಂಬರ್ 15ರಂದು ಆರಂಭವಾದ ದೇಶವ್ಯಾಪಿ ಮುಷ್ಕರದಲ್ಲಿ ಸುಮಾರು 2 ಲಕ್ಷ ಮಂದಿ ಪಾಲ್ಗೊಂಡರು ಎಂಬುದಾಗಿಯೂ ಸಚಿವರು ಹೇಳಿದರು.

ಪ್ರತಿಭಟನೆಗಳಲ್ಲಿ ಕನಿಷ್ಠ 143 ಮಂದಿ ಮೃತಪಟ್ಟಿರುವುದಕ್ಕೆ ತನ್ನ ಬಳಿ ದಾಖಲೆಗಳಿವೆ ಎಂದು ಲಂಡನ್‌ನ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಸೋಮವಾರ ಹೇಳಿದೆ.

ಚುನಾವಣಾ ವಂಚನೆ ವಿರುದ್ಧ 2009ರಲ್ಲಿ ನಡೆದ ‘ಹಸಿರು ಕ್ರಾಂತಿ’ ಪ್ರತಿಭಟನೆಗಳನ್ನು ಇರಾನ್ ಹತ್ತಿಕ್ಕಿದ ಬಳಿಕ, ಇದು ಆ ದೇಶದಲ್ಲಿ ನಡೆಯುತ್ತಿರುವ ಬೃಹತ್ ಸರಕಾರ ವಿರೋಧಿ ಪ್ರತಿಭಟನೆಯಾಗಿದೆ.

ಆ್ಯಮ್ನೆಸ್ಟಿಯ ಅಂಕಿ-ಸಂಖ್ಯೆ ತಿರಸ್ಕರಿಸಿದ ಇರಾನ್

ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ನೀಡಿರುವ ಮೃತರ ಸಂಖ್ಯೆಯನ್ನು ಇರಾನ್ ತಿರಸ್ಕರಿಸಿದೆ. ಭದ್ರತಾ ಪಡೆಗಳ ಸದಸ್ಯರೂ ಸೇರಿದಂತೆ ಹಲವಾರು ಮಂದಿ ಮೃತಪಟ್ಟಿದ್ದಾರೆ ಹಾಗೂ 1,000ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ.

ಆದರೆ, ಸುಮಾರು 4,000 ಮಂದಿಯನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ‘ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಇನ್ ಇರಾನ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News