ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಿ: ಶ್ರೀಕಾಂತ್ ಶುಭಾರಂಭ
ಲಕ್ನೊ, ನ.27: ಮೂರನೇ ಶ್ರೇಯಾಂಕದ ಕಿಡಂಬಿ ಶ್ರೀಕಾಂತ್ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಇಲ್ಲಿ ಬುಧವಾರ 36 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ರಶ್ಯದ ವ್ಲಾಡಿಮಿರ್ ಮಾಲ್ಕೊವ್‌ರನ್ನು 21-12, 21-11 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಎದುರಾಳಿ ಫ್ರಾನ್ಸ್‌ನ ಲುಕಾಸ್ ಕೊರ್ವೀ ವಾಕ್‌ಓವರ್ ಪಡೆದ ಕಾರಣ ಪಾರುಪಲ್ಲಿ ಕಶ್ಯಪ್ ಎರಡನೇ ಸುತ್ತಿಗೆ ಪ್ರವೇಶಿಸಿದರು. ಫ್ರಾನ್ಸ್‌ನ ಇನ್ನೋರ್ವ ಶಟ್ಲರ್ ಥಾಮಸ್ ರೌಕ್ಸೆಲ್ ಕೂಡಾ ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಕಾರಣ ಭಾರತದ 18ರ ಹರೆಯದ ಯುವ ಶಟ್ಲರ್ ಲಕ್ಷ ಸೇನ್ ವಾಕ್ ಓವರ್ ಪಡೆದರು. ಸೇನ್ ಕಳೆದ ವಾರ ಸ್ಕಾಟಿಶ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಅಶ್ಮಿತಾ ಚಾಲಿಹಾ ಸಹ ಆಟಗಾರ್ತಿ ವ್ರಶಾಲಿ ಗುಮ್ಮಡಿ ಅವರನ್ನು 32 ನಿಮಿಷಗಳ ಹೋರಾಟದಲ್ಲಿ 21-16, 21-16 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು.