ಚಿನ್ನ ಜಯಿಸಿದ ದೀಪಿಕಾ ಕುಮಾರಿ, ಅಂಕಿತಾಗೆ ಬೆಳ್ಳಿ

Update: 2019-11-28 18:07 GMT

ಬ್ಯಾಂಕಾಕ್, ನ.28: ಹಿರಿಯ ಆರ್ಚರಿ ದೀಪಿಕಾ ಕುಮಾರಿ ಹಾಗೂ ಅಂಕಿತಾ ಭಕ್ತ್ ಚಿನ್ನ ಹಾಗೂ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಭಾರತ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

21ನೇ ಆವೃತ್ತಿಯ ಚಾಂಪಿಯನ್‌ಶಿಪ್ ಕೊನೆಗೊಂಡ ಬೆನ್ನಿಗೇ ಗುರುವಾರ ನಡೆದ ಕಾಂಟಿನೆಂಟೆಲ್ ಕ್ವಾಲಿಫಿಕೇಶನ್ ಟೂರ್ನಿಯಲ್ಲಿ ದೀಪಿಕಾ ಹಾಗೂ ಅಂಕಿತಾ ಈ ಸಾಧನೆ ಮಾಡಿದ್ದಾರೆ. ಕ್ವಾಲಿಫಿಕೇಶನ್‌ನಲ್ಲಿ ಮೂರು ವೈಯಕ್ತಿಕ ಸ್ಥಾನಗಳು ಖಾಲಿ ಇದ್ದವು. ರಾಷ್ಟ್ರೀಯ ಆರ್ಚರಿ ಒಕ್ಕೂಟ ಎಎಐ ಅಮಾನತುಗೊಂಡಿರುವ ಕಾರಣ ಭಾರತೀಯ ಆರ್ಚರಿಗಳಾದ ಅಗ್ರ ಶ್ರೇಯಾಂಕದ ದೀಪಿಕಾ ಹಾಗೂ ಆರನೇ ಶ್ರೇಯಾಂಕದ ಅಂಕಿತಾ ರಾಷ್ಟ್ರಧ್ವಜವಿಲ್ಲದೆ ಸ್ಪರ್ಧಿಸಿದರೂ ಅಮೋಘ ಪ್ರದರ್ಶನ ನೀಡಿದರು. ನಂ.1 ರ್ಯಾಂಕಿನ ದೀಪಿಕಾ ಮಲೇಶ್ಯಾದ ನೂರ್ ಅಫಿಸಾ ಅಬ್ದುಲ್ ಹಲೀಲ್‌ರನ್ನು 7-2, ಝಹ್ರಾ ನೆಮಾಟಿ(ಇರಾನ್)6-4 ಹಾಗೂ ಸ್ಥಳೀಯ ಆಟಗಾರ್ತಿ ನರಿಸರಾ ಖನ್ಹಿರಾಂಚೈಯೊರನ್ನು 6-2 ಅಂತರದಿಂದ ಮಣಿಸಿ ಅಂತಿಮ 4ರ ಸುತ್ತು ತಲುಪಿದರು. ಈ ಮೂಲಕ ಒಲಿಂಪಿಕ್ಸ್ ಕೋಟಾವನ್ನು ಭರ್ತಿ ಮಾಡಿದರು. ಏಕಪಕ್ಷೀಯವಾಗಿ ಸಾಗಿದ ಮತ್ತೊಂದು ಪಂದ್ಯದಲ್ಲಿ ಎನ್‌ಗುಯೆಟ್‌ರನ್ನು 6-2 ಅಂತರದಿಂದ ಮಣಿಸಿದ ದೀಪಿಕಾ ಫೈನಲ್‌ಗೆ ತೇರ್ಗಡೆಯಾದರು.

ಮತ್ತೊಂದೆಡೆ, ಅಂಕಿತಾ ಹಾಂಕಾಂಗ್‌ನ ಲ್ಯಾಮ್ ಶುಕ್ ಚಿಂಗ್‌ರನ್ನು 7-1, ವಿಯೆಟ್ನಾಂನ ಗುಯೆನ್ ಥಿ ಫುಯೊಂಗ್ 6-0, ಅನಸ್ತೇಸಿಯ ಬನ್ನೋವಾ(ಕಝಖ್‌ಸ್ತಾನ)ಅವರನ್ನು 6-4 ಹಾಗೂ ಭೂತಾನ್‌ನ ಕರ್ಮಾರನ್ನು 6-2 ಅಂತರದಿಂದ ಮಣಿಸಿದರು. ಫೈನಲ್‌ನಲ್ಲಿ ಮುಖಾಮುಖಿಯಾದ ದೀಪಿಕಾ ಹಾಗೂ ಅಂಕಿತಾ ಕ್ರಮವಾಗಿ ಮೊದಲನೇ ಹಾಗೂ ಎರಡನೇ ಸ್ಥಾನ ಪಡೆದರು. ಈ ವರ್ಷಾರಂಭದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತರುಣ್‌ದೀಪ್ ರಾಯ್, ಅತನು ದಾಸ್ ಹಾಗೂ ಪ್ರವೀಣ್ ಜಾಧವ್ ಪುರುಷರ ರಿಕರ್ವ್ ವಿಭಾಗದಲ್ಲಿ ಮೊದಲ ಒಲಿಂಪಿಕ್ಸ್ ಕೋಟಾವನ್ನು ಬಾಚಿಕೊಂಡಿದ್ದು, ಇದೀಗ ಭಾರತ ಎರಡನೇ ಕೋಟಾವನ್ನು ಭರ್ತಿ ಮಾಡಿದೆ. 2020ರಲ್ಲಿ ಬರ್ಲಿನ್‌ನಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯು ಆರ್ಚರಿಗೆ ಕೊನೆಯ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News