ಗುವಾಹಟಿಯ ಕ್ರೀಡಾಂಗಣದ ಬಗ್ಗೆ ಫಿಫಾ ನಿಯೋಗ ಮೆಚ್ಚುಗೆ

Update: 2019-11-28 18:21 GMT

ಗುವಾಹಟಿ, ನ.28: ಮುಂದಿನ ವರ್ಷ ಅಂಡರ್ -17 ವನಿತೆಯರ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುವ ವಿಚಾರಕ್ಕೆ ಸಂಬಂಧಿಸಿ ಗುವಾಹಟಿಯ ಇಂದಿರಾ ಗಾಂಧಿ ಅಥ್ಲೆಟಿಕ್ ಇಂಟರ್‌ನ್ಯಾಶನಲ್ ಸ್ಟೇಡಿಯಂ ಹಾಗೂ ಅಲ್ಲಿರುವ ತರಬೇತಿ ಸೌಲಭ್ಯಗಳ ಬಗ್ಗೆ ಸ್ಥಳೀಯ ಸಂಘಟನಾ ಸಮಿತಿ (ಎಲ್‌ಒಸಿ) ಸದಸ್ಯರೊಂದಿಗೆ ಫಿಫಾ ನಿಯೋಗ ಗುರುವಾರ ಪರಿಶೀಲನೆ ನಡೆಸಿದೆ.

ಗುವಾಹಟಿ ಕ್ರೀಡಾಂಗಣದಲ್ಲಿರುವ ಸೌಲಭ್ಯಗಳ ಬಗ್ಗೆ ಫಿಫಾ ಪ್ರತಿನಿಧಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ. ಫಿಫಾ ಅಂಡರ್ -17 ವನಿತೆಯರ ವಿಶ್ವಕಪ್‌ಗಾಗಿ ಗುವಾಹಟಿ ಕ್ರೀಡಾಂಗಣವನ್ನು ಆಯ್ಕೆ ಮಾಡಿದರೆ ಯಶಸ್ವಿಯಾಗಬಹುದು. 2017ರಲ್ಲಿ ಇಲ್ಲಿ ಫಿಫಾ ಅಂಡರ್ -17 ಪುರುಷರ ವಿಶ್ವಕಪ್‌ನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಎಂದು ಫಿಫಾ ನಿಯೋಗದ ಸದಸ್ಯೆ ಆಲಿವರ್ ವೊಗ್ಟ್ ಅವರು ಹೇಳಿದ್ದಾರೆ.

ದೇಶದ ಈ ಭಾಗದಲ್ಲಿ ಫುಟ್ಬಾಲ್‌ನ ಉತ್ಸಾಹ ನಮಗೆ ತಿಳಿದಿದೆ ಮತ್ತು ನಾವು ಯಶಸ್ಸನ್ನು ಪುನರಾವರ್ತಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ಧಾರೆ. ಎಲ್‌ಒಸಿಯ ಟೂರ್ನಮೆಂಟ್ ಡೈರೆಕ್ಟರ್ ರೋಮಾ ಖನ್ನಾ ‘‘ಗುವಾಹಟಿಗೆ ಮರಳುವುದು ನಿಜಕ್ಕೂ ಒಳ್ಳೆಯದು. ನಮಗೆ ತಿಳಿದಿರುವಂತೆ ಈ ಪ್ರದೇಶವು ಫುಟ್ಬಾಲ್‌ನತ್ತ ಹೆಚ್ಚಿನ ಒಲವು ಹೊಂದಿದೆ. ಪ್ರತಿಭಾವಂತ ಫುಟ್ಬಾಲ್ ಆಟಗಾರರು ಇದ್ದಾರೆ. ನಾವು 2017 ರಲ್ಲಿ ಅಪೂರ್ವವಾಗಿ ಪಂದ್ಯಾವಳಿಯನ್ನು ಸಂಘಟಿಸಿದ್ದೇವೆ. ಆದರೆ ಅದು ಮಾನದಂಡ. ಎಲ್ಲರ ಬೆಂಬಲ ಇನ್ನೂ ಉತ್ತಮವಾಗಿರಬೇಕು. 2017 ರಿಂದ ಮೂಲಸೌಕರ್ಯಗಳನ್ನು ಹೊಂದಿದೆ. ಆದರೆ ಕೆಲವು ಮಾರ್ಪಾಡುಗಳ ಅಗತ್ಯವಿದೆ’’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಮೂಲಸೌಕರ್ಯಗಳು ಇರುವುದರಿಂದ ಮಹಿಳಾ ಫುಟ್ಬಾಲ್ ವಿಶ್ವಕಪ್ ಆಯೋಜಿಸಲು ಸುಲಭವಾಗಲಿದೆ. ಅಂಡರ್-19 ವಿಶ್ವಕಪ್ ದೇಶದಲ್ಲಿ ಮಹಿಳಾ ಫುಟ್ಬಾಲ್‌ಗೆ ಹೊಸ ಆಯಾಮವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ನಾವು ಎಲ್ಲಾ ಮಧ್ಯಸ್ಥಗಾರರ ಬೆಂಬಲದೊಂದಿಗೆ ನಾವು ಅದನ್ನು ಮಾಡಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಅಸ್ಸಾಂನ ಕ್ರೀಡಾ ಮತ್ತು ಯುವ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಜೋಶಿ ಈ ಪಂದ್ಯಾವಳಿ ಗುವಾಹಟಿಯಲ್ಲಿ ನಡೆಸಲು ಮುಖ್ಯಮಂತ್ರಿ ಮತ್ತು ಅಸ್ಸಾಂ ಸರಕಾರ ಬಹಳ ಉತ್ಸುಕವಾಗಿದೆ ಮತ್ತು ಅಗತ್ಯವಿರುವ ಯಾವುದೇ ಬೆಂಬಲವನ್ನು ನೀಡಲು ಸಂಪೂರ್ಣ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.

 ಒಡಿಶಾದ ರಾಜಧಾನಿಯಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಲು ಫಿಫಾ-ಎಲ್‌ಒಸಿ ನಿಯೋಗ ಶುಕ್ರವಾರ ಭುವನೇಶ್ವರಕ್ಕೆ ಪ್ರಯಾಣಿಸಲಿದೆ. ಫಿಫಾ ಅಂಡರ್ -17 ವನಿತೆಯರ ವಿಶ್ವಕಪ್ ಫುಟ್ಬಾಲ್ 2020 ನವೆಂಬರ್ 2 ರಿಂದ 21 ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News