ಶುಕ್ರವಾರದಿಂದ ಡೇವಿಸ್ ಕಪ್: ಪಾಕ್‌ಗೆ ಬಲಿಷ್ಠ ಭಾರತ ಮುಖಾಮುಖಿ

Update: 2019-11-28 18:25 GMT

ನೂರ್-ಸುಲ್ತಾನ್(ಕಝಖ್‌ಸ್ತಾನ), ನ.28: ಬಲಿಷ್ಠ ಭಾರತ ತಂಡ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಡೇವಿಸ್ ಕಪ್ ಪಂದ್ಯದಲ್ಲಿ ಪಾಕಿಸ್ತಾನದ ಸವಾಲನ್ನು ಮೆಟ್ಟಿನಿಲ್ಲುವ ನಿರೀಕ್ಷೆಯಿದೆ. ನಾಟಕೀಯ ತಿರುವಿನಲ್ಲಿ ಡೇವಿಸ್ ಕಪ್ ಪಂದ್ಯವನ್ನು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ ಕಝಖ್‌ಸ್ತಾನಕ್ಕೆ ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟ(ಐಟಿಎಫ್)ಸ್ಥಳಾಂತರ ಗೊಳಿಸಿತ್ತು.

ಟೂರ್ನಿ ನಡೆಯುವ ಸ್ಥಳದ ಬಗ್ಗೆ ಕೊನೆಯ ಕ್ಷಣದ ತನಕ ಅನಿಶ್ಚಿತತೆ ಇದ್ದ ಹಿನ್ನೆಲೆಯಲ್ಲಿ ಉಭಯ ತಂಡಗಳು ಆಟಗಾರರ ಆಯ್ಕೆಯ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದ್ದವು. ಪಾಕಿಸ್ತಾನದ ಟೆನಿಸ್ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಐಟಿಎಫ್‌ನ ಸ್ವತಂತ್ರ ಟ್ರಿಬ್ಯೂನಲ್ ಡೇವಿಸ್ ಕಪ್ ಪಂದ್ಯವನ್ನು ನೂರ್-ಸುಲ್ತಾನ್‌ಗೆ ಸ್ಥಳಾಂತರಗೊಳಿಸಿತ್ತು.

ಪಂದ್ಯವನ್ನು ಸ್ಥಳಾಂತರಗೊಳಿಸಿದ ಕಾರಣ ಭದ್ರತೆಯ ಭೀತಿ ನಿವಾರಣೆಯಾಗಿದೆ. ಆದರೆ, ಪಾಕಿಸ್ತಾನದ ಪ್ರಮುಖ ಆಟಗಾರರಾದ ಐಸಮ್ ವುಲ್ ಹಕ್ ಖುರೇಶಿ ಹಾಗೂ ಅಖೀಲ್ ಖಾನ್ ಟೂರ್ನಿಯಿಂದ ಹೊರಗುಳಿದ ಕಾರಣ ಪಂದ್ಯದಲ್ಲಿ ಸ್ಪರ್ಧೆ ಇಲ್ಲದಂತಾಗಿದೆ.

ಭಾರತೀಯ ಆಟಗಾರರಿಗೆ ಗ್ರಾನ್‌ಸ್ಲಾಮ್‌ನಲ್ಲಿ ಆಡಿದ ಅನುಭವ ಬೆನ್ನಿಗಿದೆ. ಆದರೆ ಪಾಕ್ ಆಟಗಾರರು ಐಟಿಎಫ್ ಮಟ್ಟದ ಟೂರ್ನಿಗಳಲ್ಲಿ ತಮ್ಮ ಛಾಪು ಮೂಡಿಸಲು ಪರದಾಡುತ್ತಿದ್ದಾರೆ.

ಪಾಕಿಸ್ತಾನದ ಅಗ್ರ ಆಟಗಾರರು ಭಾಗವಹಿಸುತ್ತಿದ್ದಲ್ಲಿ ಕೊನೆಪಕ್ಷ ಡಬಲ್ಸ್ ಪಂದ್ಯವಾದರೂ ಸ್ಪರ್ಧಾತ್ಮಕವಾಗಿರುತ್ತಿತ್ತು. ಪಂದ್ಯ ಸ್ಥಳಾಂತರಗೊಂಡಿರುವುದನ್ನು ಪ್ರತಿಭಟಿಸಿ ಖುರೇಶಿ ಹಾಗೂ ಖಾನ್ ಟೂರ್ನಿಯನ್ನು ಬಹಿಷ್ಕರಿಸಿದ್ದರು.

ಪಂದ್ಯದಲ್ಲಿ ತಂಡದ ಸವಾಲನ್ನು ಮುನ್ನಡೆಸುತ್ತಿರುವ ಪಾಕಿಸ್ತಾನದ ಜೂನಿಯರ್ ಆಟಗಾರರಿಗೆ ಇದು ಹೊಸ ಅನುಭವವಾಗಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ 2020ರ ವಿಶ್ವ ಗ್ರೂಪ್ ಕ್ವಾಲಿಫೈಯರ್‌ನಲ್ಲಿ ಪಾಲ್ಗೊಳ್ಳಲು ಕ್ರೊಯೇಶಿಯಕ್ಕೆ ತೆರಳಲಿದೆೆ.

 46ರ ಹರೆಯದ ಪೇಸ್‌ಗೆ ಡೇವಿಸ್ ಕಪ್‌ನಲ್ಲಿ ಗರಿಷ್ಠ ಪಂದ್ಯಗಳಲ್ಲಿ ಜಯ ಸಾಧಿಸಿದ ತನ್ನ ದಾಖಲೆಯನ್ನು ಉತ್ತಮಪಡಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಪೇಸ್ ಈ ತನಕ 43 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಚೀನಾ ವಿರುದ್ಧ ಪಂದ್ಯದಲ್ಲಿ ಕಳೆದ ವರ್ಷ ಈ ಸಾಧನೆ ಮಾಡಿದ್ದರು.

18 ಗ್ರಾನ್‌ಸ್ಲಾಮ್ ಟ್ರೋಫಿಗಳ ಒಡೆಯ ಪೇಸ್‌ಗೆ ಚೊಚ್ಚಲ ಡೇವಿಸ್‌ಕಪ್ ಪಂದ್ಯ ಆಡಲು ಸಜ್ಜಾಗಿರುವ ಜೀವನ್ ನೆಡುನ್‌ಚೆಝಿಯನ್ ಡಬಲ್ಸ್ ಪಂದ್ಯದಲ್ಲಿ ಸಾಥ್ ನೀಡಲಿದ್ದಾರೆ. ಚೆನ್ನೈನ ಎಡಗೈ ಆಟಗಾರ ಜೀವನ್ ಚೊಚ್ಚಲ ಡೇವಿಸ್ ಕಪ್ ಪಂದ್ಯ ಆಡುತ್ತಿರುವ ಭಾರತದ 75ನೇ ಆಟಗಾರನಾಗಿದ್ದಾರೆ. ಫಾರ್ಮ್‌ನಲ್ಲಿರುವ ಸುಮಿತ್ ನಗಾಲ್‌ಗೆ ಡೇವಿಸ್ ಕಪ್‌ನಲ್ಲಿ ಮೊದಲ ಪಂದ್ಯ ಗೆಲ್ಲುವ ಅವಕಾಶ ಲಭಿಸಿದೆ. ಈ ತನಕ ಆಡಿರುವ ಸ್ಪೇನ್(2016) ಹಾಗೂ ಚೀನಾ(2018) ವಿರುದ್ಧದ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ನಗಾಲ್ ಸೋತಿದ್ದಾರೆ.

 ನಂ.2ನೇ ಸಿಂಗಲ್ಸ್ ಆಟಗಾರನಾಗಿ ಡೇವಿಸ್ ಕಪ್ ಆಡುತ್ತಿರುವ ರಾಮಕುಮಾರ್ ತನ್ನದೇ ಗೆಲುವು-ಸೋಲಿನ ದಾಖಲೆ ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ. ಶುಕ್ರವಾರ ಮುಹಮ್ಮದ್ ಶುಐಬ್‌ರನ್ನು ಎದುರಿಸುವ ಮೂಲಕ ರಾಮಕುಮಾರ್ ತನ್ನ ಹೋರಾಟವನ್ನು ಆರಂಭಿಸಲಿದ್ದಾರೆ. 17ರ ಹರೆಯದ ಶುಐಬ್ 2019ರ ಋತುವಿನಲಿ ಒಂದೂ ಸಿಂಗಲ್ಸ್ ಪಂದ್ಯವನ್ನು ಆಡಿಲ್ಲ.

ಎರಡನೇ ಸಿಂಗಲ್ಸ್‌ನಲ್ಲಿ ನಗಾಲ್ ಅವರು ಅಬ್ದುಲ್ ರಹ್ಮಾನ್‌ರನ್ನು ಎದುರಿಸಲಿದ್ದಾರೆ. ‘‘ಪಾಕಿಸ್ತಾನ ತಂಡದಲ್ಲಿ ಯುವ ಆಟಗಾರರಿದ್ದಾರೆ. ಅವರು ಯಾವುದೇ ಒತ್ತಡವಿಲ್ಲದೆ ಚೆನ್ನಾಗಿ ಆಡಬಲ್ಲರು. ಅವರು ಭಾರತದ ಅನುಭವಿ ಆಟಗಾರರ ವಿರುದ್ಧ ಸೆಣಸಾಡಬೇಕಾಗಿದೆ. ನಾವು ವೈಟ್‌ವಾಶ್ ಸಾಧಿಸುವುದನ್ನು ಎದುರು ನೋಡುತ್ತಿದ್ದೇನೆ ’’ ಎಂದು ಭಾರತದ ಆಟವಾಡದ ನಾಯಕ ರೋಹಿತ್ ರಾಜ್‌ಪಾಲ್ ಹೇಳಿದ್ದಾರೆ.

ಎರಡನೇ ದಿನವಾದ ಶನಿವಾರ ರಿವರ್ಸ್ ಸಿಂಗಲ್ಸ್ ಪಂದ್ಯಗಳು ನಡೆಯುವ ಮೊದಲು ಪೇಸ್ ಹಾಗೂ ಜೀವನ್ ಡಬಲ್ಸ್ ಪಂದ್ಯದಲ್ಲಿ ಶುಐಬ್ ಹಾಗೂ ರಹ್ಮಾನ್‌ರನ್ನು ಎದುರಿಸಲಿದ್ದಾರೆ.

ಒಂದು ವೇಳೆ ಭಾರತ 3-0 ಮುನ್ನಡೆ ಸಾಧಿಸಿದರೂ ನಾಲ್ಕನೇ ಪಂದ್ಯ ಆಡಲಾಗುತ್ತದೆ. ಐದನೇ ಪಂದ್ಯವನ್ನು ಆಡುವುದು ತಂಡಗಳಿಗೆ ಬಿಟ್ಟ ವಿಚಾರವಾಗಿದೆ.

ಪಂದ್ಯಗಳು ಶನಿವಾರ ಭಾರತದ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ರವಿವಾರ ಬೆಳಗ್ಗೆ 11:30ಕ್ಕೆ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News