ಖೇಲ್‌ರತ್ನ ಪ್ರಶಸ್ತಿ ಸ್ವೀಕರಿಸಿದ ಕುಸ್ತಿಪಟು ಬಜರಂಗ್ ಪೂನಿಯ

Update: 2019-11-28 18:28 GMT

ಹೊಸದಿಲ್ಲಿ, ನ.28: ಭಾರತ ಕ್ರೀಡಾ ಪ್ರಾಧಿಕಾರ(ಸಾಯ್) ಪ್ರಧಾನಕಚೇರಿಯಲ್ಲಿ ಭಾರತೀಯ ಕುಸ್ತಿಪಟು ಬಜರಂಗ್ ಪೂನಿಯಾ ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಂದ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಯನ್ನು ಗುರುವಾರ ಸ್ವೀಕರಿಸಿದ್ದಾರೆ.

ರಾಷ್ಟ್ರೀಯ ಕ್ರೀಡಾದಿನದಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ರಿಂದ ಬಜರಂಗ್ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಈಗಾಗಲೇ 65ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಬಜರಂಗ್‌ಗೆ ಸ್ಮರಣಿಕೆ ಹಾಗೂ 32 ಲಕ್ಷ, 70 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಗಿದೆ. 2015ರಲ್ಲಿ ಅರ್ಜುನ ಪ್ರಶಸ್ತಿಯನ್ನು ಜಯಿಸಿದ್ದ ಬಜರಂಗ್ ಈ ವರ್ಷ ಪದ್ಮ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. 25ರ ಹರೆಯದ ಬಜರಂಗ್ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಓರ್ವ ಕುಸ್ತಿಪಟು ಆಗಿದ್ದಾರೆ.

2018ರಲ್ಲಿ ಏಶ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್, 2019ರಲ್ಲಿ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ‘‘ಪ್ರಶಸ್ತಿ ಸ್ವೀಕರಿಸಿದಾಗ ಎಲ್ಲ ಕ್ರೀಡಾಳುಗಳಿಗೆ ಆನಂದವಾಗುವುದು ಸಹಜ. ನನಗೆ ಅತ್ಯಂತ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ ಲಭಿಸಿದೆ. ಒಲಿಂಪಿಕ್ಸ್‌ನತ್ತ ಚಿತ್ತಹರಿಸುವುದು ನನ್ನ ಮೊದಲ ಆದ್ಯತೆ. ನನ್ನ ಮೇಲಿನ ಹೊಣೆಗಾರಿಕೆ ಹೆಚ್ಚಾಗಿದೆ. 10-12 ದಿನಗಳಿಂದ ತರಬೇತಿ ನಡೆಸುತ್ತಿದ್ದು,ಗಾಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ’’ಎಂದು ಬಜರಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News