ಒಂದೇ ಓವರ್ ನಲ್ಲಿ 5 ವಿಕೆಟ್ ಕಿತ್ತ ಅಭಿಮನ್ಯು ಮಿಥುನ್‌ ಗೆ ಸಮನ್ಸ್

Update: 2019-11-29 14:05 GMT

ಬೆಂಗಳೂರು, ನ.29: ಕರ್ನಾಟಕ ಪ್ರೀಮಿಯರ್ ಟ್ವೆಂಟಿ-20 ಲೀಗ್‌ನ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ವಿಚಾರಣೆಗಾಗಿ ಕರ್ನಾಟಕ ವೇಗಿ ಅಭಿಮನ್ಯು ಮಿಥುನ್ ಅವರಿಗೆ ಸಿಸಿಬಿ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ.

ಹಗರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇದೀಗ ಮಿಥುನ್ ಅವರಿಗೆ ವಿಚಾರಣೆಗೆ ಸಮನ್ಸ್ ನೀಡುವ ಮೂಲಕ ಮೊದಲ ಬಾರಿ ಈ ಹಗರಣದಲ್ಲಿ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಆಟಗಾರನನ್ನು ಪ್ರಶ್ನಿಸಲಿದ್ದಾರೆ.

 ಮಿಥುನ್ ಕೆಪಿಎಲ್‌ನಲ್ಲಿ ಶಿವಮೊಗ್ಗ ಲಯನ್ಸ್ ತಂಡದ ನಾಯಕರಾಗಿದ್ದಾರೆ. ಮಿಥುನ್ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿರುವುದನ್ನು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ದೃಢಪಡಿಸಿದ್ದಾರೆ. ಮಿಥುನ್ ಟೀಮ್ ಇಂಡಿಯಾ ಪರ ನಾಲ್ಕು ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಕಳೆದ ಕೆಪಿಎಲ್ ಆವೃತ್ತಿಯಲ್ಲಿ ಮಿಥುನ್ ಅವರ ಆಟದ ಬಗ್ಗೆ ನಾವು ಕೆಲವು ಪ್ರಶ್ನೆಗಳನ್ನು ಸಿದ್ಧಪಡಿಸಿದ್ದೇವೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಿಥುನ್ ಇನ್ನೂ ಟಿ 20 ಆಡುತ್ತಿರುವ ಸೂರತ್‌ನಲ್ಲಿದ್ದಾರೆ. ಅವರ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್‌ನ ಸೆಮಿಫೈನಲ್‌ನಲ್ಲಿ ಶುಕ್ರವಾರ ಹರ್ಯಾಣದ ವಿರುದ್ಧ ಭರ್ಜರಿ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ. ಮಿಥುನ್ ಹ್ಯಾಟ್ರಿಕ್ ಸೇರಿದಂತೆ ಒಂದೇ ಓವರ್‌ನಲ್ಲಿ ಐದು ವಿಕೆಟ್ ಪಡೆದು ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು.

ಕೆಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಸ್ಫಕ್ ಥಾರಾ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ ಥಾರಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.

ಕೆಪಿಎಲ್‌ನಲ್ಲಿ ಅಭಿಮನ್ಯು ಮಿಥುನ್ ಮೊದಲು ಮಲ್ನಾಡ್ ಗ್ಲಾಡಿಯೇಟರ್ಸ್ ಪರ ಆಡಿದ್ದರು. ನಂತರ ಅವರು ಕಳೆದ ಆವೃತ್ತಿಯಲ್ಲಿ ಶಿವಮೊಗ್ಗ ಲಯನ್ಸ್‌ಗೆ ಪರ ಆಡಿದ್ದರು. ಅದಕ್ಕೂ ಮೊದಲು ಬಿಜಾಪುರ ಬುಲ್ಸ್ ತಂಡದಲ್ಲಿದ್ದರು. ಮಿಥುನ್ ಅವರನ್ನು ಪೊಲೀಸರು ಸಂಪರ್ಕಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಪ್ರಸ್ತುತ, ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ ಆಡುತ್ತಿರುವ ಕರ್ನಾಟಕ ತಂಡದೊಂದಿಗೆ ಬೌಲರ್ ಸೂರತ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News