ಡೇವಿಸ್ ಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 2-0 ಮುನ್ನಡೆ

Update: 2019-11-29 18:07 GMT
 ರಾಮಕುಮಾರ್ ರಾಮನಾಥನ್ 

ನೂರ್-ಸುಲ್ತಾನ್(ಕಝಖ್‌ಸ್ತಾನ),ನ.29: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ 2-0 ಮುನ್ನಡೆ ಸಾಧಿಸಿರುವ ಭಾರತ ಶುಕ್ರವಾರ ಇಲ್ಲಿ ಆರಂಭವಾದ ಡೇವಿಸ್ ಕಪ್ ಟೆನಿಸ್ ಪಂದ್ಯದಲ್ಲಿ ಶುಭಾರಂಭ ಮಾಡಿದೆ.

ಸಿಂಗಲ್ಸ್ ಪಂದ್ಯವನ್ನಾಡಿದ ರಾಮಕುಮಾರ್ ರಾಮನಾಥನ್ ಹಾಗೂ ಸುಮಿತ್ ನಾಗಲ್ ಎದುರಾಳಿ ಪಾಕ್‌ನ ಯುವ ಆಟಗಾರರನ್ನು ಸುಲಭವಾಗಿ ಸೋಲಿಸಿದರು.

ಗುರುವಾರ ನಡೆದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಕೇವಲ 42 ನಿಮಿಷಗಳಲ್ಲಿ ರಾಮಕುಮಾರ್ 17ರ ಹರೆಯದ ಮುಹಮ್ಮದ್ ಶುಐಬ್‌ರನ್ನು 6-0, 6-0 ನೇರ ಸೆಟ್‌ಗಳಿಂದ ಮಣಿಸಿದರು.

ಸುಮಿತ್ 64 ನಿಮಿಷಗಳಲ್ಲಿ ಕೊನೆಗೊಂಡ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಅಬ್ದುಲ್ ರಹ್ಮಾನ್‌ರನ್ನು 6-0, 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಡೇವಿಸ್ ಕಪ್ ಪಂದ್ಯದಲ್ಲಿ ಮೊದಲ ಜಯ ದಾಖಲಿಸಿದರು. ಡೇವಿಸ್ ಕಪ್ ಪಂದ್ಯಗಳನ್ನು ತಟಸ್ಥ ತಾಣಗಳಲ್ಲಿ ಸ್ಥಳಾಂತರಗೊಳಿಸಿದ್ದನ್ನು ಖಂಡಿಸಿ ಪಾಕಿಸ್ತಾನದ ಅಗ್ರ ಆಟಗಾರರು ಡೇವಿಸ್ ಕಪ್ ಪಂದ್ಯದಿಂದ ದೂರ ಉಳಿದಿದ್ದಾರೆ.

ಮೊದಲ ಪಂದ್ಯದಲ್ಲಿ ಅಷ್ಟೊಂದು ಸ್ಪರ್ಧೆ ಕಂಡುಬರಲಿಲ್ಲ. ಭರವಸೆಯ ಪಾಕಿಸ್ತಾನದ ಯುವ ಆಟಗಾರ ರಹ್ಮಾನ್ ಸಾಧ್ಯವಾದಷ್ಟು ಪ್ರತಿರೋಧ ಒಡ್ಡಲು ಯತ್ನಿಸಿದರು. ಎರಡನೇ ಸೆಟ್‌ನ 2ನೇ ಗೇಮ್‌ನಲ್ಲಿ ಎರಡು ಬಾರಿ ನಾಗಲ್‌ಗೆ ಪ್ರತಿರೋಧ ಒಡ್ಡಿದರು. ನಾಲ್ಕು ಪಾಯಿಂಟ್ಸ್ ಪಡೆದ ಪಾಕಿಸ್ತಾನ ಮೂರನೇ ಗೇಮ್‌ನಲ್ಲಿ ಹಿಡಿತ ಸಾಧಿಸಿತು. ನಾಗಲ್ 8ನೇ ಗೇಮ್‌ನಲ್ಲಿ ಪಂದ್ಯವನ್ನು ವಶಪಡಿಸಿಕೊಂಡರು.

ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಚೊಚ್ಚಲ ಪಂದ್ಯ ಆಡುತ್ತಿರುವ ಜೀವನ್ ನೆದುಚೆಝಿಯನ್ ಶನಿವಾರ ನಡೆಯಲಿರುವ ಡಬಲ್ಸ್ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಡುವ ವಿಶ್ವಾಸದಲ್ಲಿದ್ದಾರೆ.

ಭಾರತ ಈ ತನಕ ಪಾಕ್ ವಿರುದ್ಧ ಆಡಿರುವ 6 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಈ ಟ್ರೆಂಡ್‌ನಲ್ಲಿ ಯಾವುದೇ ಬದಲಾವಣೆ ಆದಂತೆ ಕಾಣುತ್ತಿಲ್ಲ. ಶನಿವಾರ ಜಯ ಸಾಧಿಸಿದರೆ ಪೇಸ್ ಡೇವಿಸ್ ಕಪ್ ಇತಿಹಾಸದಲ್ಲಿ ಗರಿಷ್ಠ ಡಬಲ್ಸ್ ಪಂದ್ಯಗಳನ್ನು ಗೆದ್ದಂತಹ ಸಾಧನೆಯನ್ನು ಉತ್ತಮಪಡಿಸಿಕೊಳ್ಳಲಿದ್ದಾರೆ. ಇದೀಗ ಅವರು 43 ಪಂದ್ಯಗಳಲ್ಲಿ ಜಯ ಸಾಧಿಸಿ ಡೇವಿಸ್ ಕಪ್‌ನಲ್ಲಿ ಗರಿಷ್ಠ ಪಂದ್ಯಗಳಲ್ಲಿ ಜಯ ಸಾಧಿಸಿದ ಆಟಗಾರ ಯಾದಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಡೇವಿಸ್ ಪಂದ್ಯದಲ್ಲಿ ಜಯ ಸಾಧಿಸಲಿರುವ ತಂಡ ಮಾ.6-7ರಂದು ನಡೆಯುವ ವಿಶ್ವ ಗ್ರೂಪ್ ಕ್ವಾಲಿಫೈಯರ್‌ನಲ್ಲಿ ಕ್ರೋಯೇಶಿಯವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News