ಏಕೆಕ ಟೆಸ್ಟ್ ಅಫ್ಘಾನಿಸ್ತಾನ ವಿರುದ್ಧ ವಿಂಡೀಸ್‌ಗೆ ಸುಲಭ ಜಯ

Update: 2019-11-29 18:11 GMT

ಲಕ್ನೊ, ನ.29: ಅಜಾನುಬಾಹು ಬೌಲರ್ ರಾಖೀಮ್ ಕಾರ್ನ್‌ವಾಲ್ ಅಮೋಘ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಗೆದ್ದುಕೊಂಡಿದೆ.

ಕಾರ್ನ್‌ವಾಲ್ 10 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ವೆಸ್ಟ್‌ಇಂಡೀಸ್ ಮೂರನೇ ದಿನದಾಟವಾದ ಶುಕ್ರವಾರ ಅಫ್ಘಾನಿಸ್ತಾನವನ್ನು 2ನೇ ಇನಿಂಗ್ಸ್‌ನಲ್ಲಿ ಕೇವಲ 120 ರನ್‌ಗೆ ನಿಯಂತ್ರಿಸಿತು. ಗೆಲ್ಲಲು 31 ರನ್ ಗುರಿ ಪಡೆದ ವಿಂಡೀಸ್ 7.1 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟದಲ್ಲಿ ಗೆಲುವಿನ ನಗೆ ಬೀರಿತು. ಜಾನ್ ಕ್ಯಾಂಪ್‌ಬೆಲ್(ಔಟಾಗದೆ 19)ಬೌಂಡರಿ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಕ್ರೆಗ್ ಬ್ರಾತ್‌ವೇಟ್ 8 ರನ್ ಗಳಿಸಿ ಆಮಿರ್ ಹಂಝಾಗೆ ವಿಕೆಟ್ ಒಪ್ಪಿಸಿದರು.

 2017ರಲ್ಲಿ ಟೆಸ್ಟ್ ಕ್ರಿಕೆಟ್ ಸ್ಥಾನಮಾನ ಪಡೆದಿದ್ದ ಅಫ್ಘಾನಿಸ್ತಾನಕ್ಕೆ ಈ ಪಂದ್ಯ ಸತ್ವಪರೀಕ್ಷೆಯಾಗಿತ್ತು. ಅಫ್ಘಾನ್ ವರ್ಷಾರಂಭದಲ್ಲಿ ತಾನಾಡಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡು ಗಮನ ಸೆಳೆದಿತ್ತು. ಅಫ್ಘಾನಿಸ್ತಾನ ಇಂದು 7 ವಿಕೆಟ್‌ಗಳ ನಷ್ಟಕ್ಕೆ 109 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿತು. ನಾಯಕ ಜೇಸನ್ ಹೋಲ್ಡರ್ ಅಫ್ಘಾನ್‌ನ ಕೊನೆಯ ಮೂರು ವಿಕೆಟ್‌ಗಳನ್ನು ಉರುಳಿಸಿ 120 ರನ್‌ಗೆ ಆಲೌಟ್ ಮಾಡಿದರು. ಕಾರ್ನ್ ವಾಲ್ ನೇತೃತ್ವದ ವಿಂಡೀಸ್ ಸ್ಪಿನ್ ಬೌಲರ್‌ಗಳು 2ನೇ ದಿನದಾಟವಾದ ಗುರುವಾರ ಅಫ್ಘಾನ್ ತಂಡವನ್ನು ಕಾಡಿದರು. ವಿಕೆಟ್ ನಷ್ಟವಿಲ್ಲದೆ 53 ರನ್ ಗಳಿಸಿದ್ದ ಅಫ್ಘಾನ್ ದಿನದಾಟದಂತ್ಯಕ್ಕೆ 109 ರನ್‌ಗೆ ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಆರಡಿ 5 ಇಂಚು ಎತ್ತರದ, 140 ಕೆಜಿ ಭಾರದ 26ರ ಹರೆಯದ ಕಾರ್ನ್‌ವಾಲ್ ಮೊದಲ ಇನಿಂಗ್ಸ್‌ನಲ್ಲಿ 7 ಹಾಗೂ 2ನೇ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಪಡೆದರು. ರೋಸ್ಟನ್ ಚೇಸ್ 2ನೇ ಇನಿಂಗ್ಸ್ ನಲ್ಲಿ ಮೂರು ವಿಕೆಟ್‌ಗಳನ್ನು ಉರುಳಿಸಿದರು.

ಆರಂಭಿಕ ಬ್ಯಾಟ್ಸ್‌ಮನ್ ಜಾವೇದ್ ಅಹ್ಮದಿ ಅಗ್ರ ಸ್ಕೋರರ್(62) ಎನಿಸಿಕೊಂಡರು.

ಇದಕ್ಕೂ ಮೊದಲು ಮೊದಲ ಇನಿಂಗ್ಸ್ ನಲ್ಲಿ 277 ರನ್ ಗಳಿಸಿದ ವಿಂಡೀಸ್ 90 ರನ್ ಮುನ್ನಡೆ ಪಡೆದಿತ್ತು. ಬ್ರೂಕ್ಸ್ ಚೊಚ್ಚಲ ಟೆಸ್ಟ್ ಶತಕ(111)ಸಿಡಿಸಿದರು.

ಕಾರ್ನ್‌ವಾಲ್(7-75)ಸ್ಪಿನ್ ಮೋಡಿಗೆ ಸಿಲುಕಿದ್ದ ಅಫ್ಘಾನಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ ಮೊದಲದಿನದಾಟದಲ್ಲಿ 187 ರನ್‌ಗೆ ಆಲೌಟಾಗಿತ್ತು.

ಎಡಗೈ ಸ್ಪಿನ್ನರ್ ಆಮಿರ್ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು(5-74)ಪಡೆದು ಸ್ಮರಣೀಯ ಪ್ರದರ್ಶನ ನೀಡಿದರು. ಅಫ್ಘಾನಿಸ್ತಾನ ತಂಡ ಮಾರ್ಚ್‌ನಲ್ಲಿ ಆಡಿದ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಹೊಸ ಟೆಸ್ಟ್ ತಂಡ ಐರ್ಲೆಂಡ್‌ನ್ನು ಸೋಲಿಸಿತ್ತು. ಸೆಪ್ಟಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧವೂ ಜಯ ಸಾಧಿಸಿತ್ತು. ಇತ್ತೀಚೆಗಷ್ಟೇ ರಶೀದ್ ಖಾನ್ ನೇತೃತ್ವದ ಅಫ್ಘಾನ್ ತಂಡ ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡು ಎಲ್ಲರ ಗಮನ ಸೆಳೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News