ವಾರ್ನರ್- ಲ್ಯಾಬುಸ್ಚಾಗ್ನೆ ಆಸ್ಟ್ರೇಲಿಯ ಭರ್ಜರಿ ಜೊತೆಯಾಟ

Update: 2019-11-29 18:15 GMT

ಅಡಿಲೇಡ್, ನ.29: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಹಾಗೂ ಲ್ಯಾಬುಸ್ಚಾಗ್ನೆ ಅವರ ಭರ್ಜರಿ ಜೊತೆಯಾಟದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯ ತಂಡ ಪಾಕಿಸ್ತಾನ ವಿರುದ್ಧ ಶುಕ್ರವಾರ ಆರಂಭವಾದ ಹಗಲು-ರಾತ್ರಿ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಉತ್ತಮ ಸ್ಕೋರ್ ಗಳಿಸಿದೆ.

ಮಳೆಯಿಂದಾಗಿ ಮೊದಲ ದಿನದಾಟ ಬೇಗನೆ ಕೊನೆಗೊಂಡಾಗ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 73 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿದೆ. ವಾರ್ನರ್(ಔಟಾಗದೆ 166, 228 ಎಸೆತ, 19 ಬೌಂಡರಿ)ಹಾಗೂ ಲ್ಯಾಬುಸ್ಚಾಗ್ನೆ(ಔಟಾಗದೆ 126, 205 ಎಸೆತ, 17 ಬೌಂಡರಿ)ಎರಡನೇ ವಿಕೆಟ್‌ಗೆ 294 ರನ್ ದಾಖಲೆಯ ಜೊತೆಯಾಟ ನಡೆಸಿದರು. ಇದು ಆಸ್ಟ್ರೇಲಿಯದಲ್ಲಿ ವಾರ್ನರ್-ಲ್ಯಾಬುಸ್ಚಾಗ್ನೆ 2ನೇ ವಿಕೆಟ್‌ಗೆ ಗಳಿಸಿದ 5ನೇ ಶ್ರೇಷ್ಠ ಜೊತೆಯಾಟವಾಗಿದೆ.

ಆಸ್ಟ್ರೇಲಿಯ 3.3ನೇ ಓವರ್‌ನಲ್ಲಿ ಬರ್ನ್ಸ್(4)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ ಜೊತೆಯಾದ ವಾರ್ನರ್-ಲ್ಯಾಬುಸ್ಚಾಗ್ನೆ ಪಾಕ್ ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ವಾರ್ನರ್ 23ನೇ ಶತಕ ಸಿಡಿಸಿದರು. ಆರಂಭಿಕ ಆಟಗಾರನಾಗಿ ಗರಿಷ್ಠ ಶತಕ ಸಿಡಿಸಿದ ಆಸ್ಟ್ರೇಲಿಯದ ಎರಡನೇ ಹಾಗೂ ವಿಶ್ವದ 5ನೇ ಓಪನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮ್ಯಾಥ್ಯೂ ಹೇಡನ್ (30)ಆಸೀಸ್ ಪರ ಗರಿಷ್ಠ ಶತಕಗಳನ್ನು ಸಿಡಿಸಿದ ಟೆಸ್ಟ್ ಓಪನರ್ ಆಗಿದ್ದಾರೆ. ಭಾರತದ ಸುನೀಲ್ ಗವಾಸ್ಕರ್(33), ಇಂಗ್ಲೆಂಡ್‌ನ ಅಲಿಸ್ಟೈರ್ ಕುಕ್(31), ಹೇಡನ್(30) ಹಾಗೂ ದ. ಆಫ್ರಿಕಾದ ಗ್ರೇಮ್ ಸ್ಮಿತ್(27)ಗರಿಷ್ಠ ಶತಕ ಸಿಡಿಸಿದ ಆರಂಭಿಕ ಆಟಗಾರರ ಪಟ್ಟಿಯಲ್ಲಿದ್ದಾರೆ.

ವಾರ್ನರ್ ಸರಣಿಯಲ್ಲಿ ಸತತ ಎರಡನೇ ಬಾರಿ 150ಕ್ಕೂ ಅಧಿಕ ರನ್ ಗಳಿಸಿದರೆ, ಲ್ಯಾಬುಸ್ಚಾಗ್ನೆ ಸತತ ಎರಡನೇ ಶತಕ ಸಿಡಿಸಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News