ಚಾಂಪಿಯನ್ ಪಟ್ಟಕ್ಕಾಗಿ ಕರ್ನಾಟಕ -ತಮಿಳುನಾಡು ಹಣಾಹಣಿ

Update: 2019-11-30 17:55 GMT

ಸೂರತ್, ನ.30: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯ ಫೈನಲ್‌ನಲ್ಲಿ ರವಿವಾರ ಚಾಂಪಿಯನ್ ಪಟ್ಟಕ್ಕಾಗಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಹಣಾಹಣಿ ನಡೆಸಲಿವೆ.

ಲಾಲಾಭಾಯ್ ಕಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡುವುದನ್ನು ನಿರೀಕ್ಷಿಸಲಾಗಿದೆ. ಕರ್ನಾಟಕ ತಂಡ ಸೆಮಿಫೈನಲ್‌ನಲ್ಲಿ ಹರ್ಯಾಣವನ್ನು ಮತ್ತು ತಮಿಳುನಾಡು ತಂಡ ರಾಜಸ್ಥಾನವನ್ನು ಮಣಿಸಿ ಫೈನಲ್ ತಲುಪಿವೆ. ಇಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಹರ್ಯಾಣ ವಿರುದ್ಧ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಒಂದೇ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಉಡಾಯಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದರು. ಮಿಥುನ್ ನೆರವಿನಲ್ಲಿ ಈ ಪಂದ್ಯದಲ್ಲಿ ಹರ್ಯಾಣವನ್ನು 8 ವಿಕೆಟ್‌ಗಳ ಅಂತರದಲ್ಲಿ ಸೋಲಿಸಿದ್ದ ಕರ್ನಾಟಕ ಫೈನಲ್ ಪ್ರವೇಶಿಸಿದೆ. ಗೆಲುವಿಗೆ 195 ರನ್ ಗಳಿಸಬೇಕಿದ್ದ ಕರ್ನಾಟಕ ತಂಡ 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 195 ರನ್ ಗಳಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹರ್ಯಾಣ ತಂಡ ಕರ್ನಾಟಕದ ವೇಗಿ ಮಿಥುನ್ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 194 ರನ್ ಗಳಿಸಿತ್ತು. ಅದೇ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಸೆಮಿಫೈನಲ್‌ನಲ್ಲಿ ತಮಿಳುನಾಡು ತಂಡದ ಸ್ಪಿನ್ ದಾಳಿಗೆ ಸಿಲುಕಿದ್ದ ರಾಜಸ್ಥಾನ ತಂಡ 9 ವಿಕೆಟ್ ನಷ್ಟದಲ್ಲಿ 112 ರನ್ ಗಳಿಸಿತ್ತು. ಕರ್ನಾಟಕ ತಂಡ ಲೀಗ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 20 ಪಾಯಿಂಟ್ಸ್ ಗಳಿಸಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸಿತ್ತು. ತಮಿಳುನಾಡು ತಂಡ ಆಡಿರುವ 6 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 20 ಪಾಯಿಂಟ್ಸ್ ಗಳಿಸಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು.

 ಸೂಪರ್ ಲೀಗ್‌ನಲ್ಲಿ ತಮಿಳುನಾಡು ಮತ್ತು ಕರ್ನಾಟಕ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿವೆ. ಸೂಪರ್‌ಲೀಗ್‌ನಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಮುಂಬೈ ಆಡಿದ 4 ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿದ್ದವು. ಆದರೆ ನೆಟ್ ರನ್‌ರೇಟ್ ಆಧಾರದಲ್ಲಿ ತಮಿಳುನಾಡು ಮತ್ತು ಕರ್ನಾಟಕ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿದವು. ಮುಂಬೈ ಸೆಮಿಫೈನಲ್‌ಗೇರುವ ಅವಕಾಶದಿಂದ ವಂಚಿತಗೊಂಡಿತು.

ಹಾಲಿ ಚಾಂಪಿಯನ್ ಕರ್ನಾಟಕ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಪ್ರಯತ್ನ ನಡೆಸಲಿದೆ. ಮೊದಲು ಈ ಟೂರ್ನಿ ಅಂತರ್‌ರಾಜ್ಯ ಟ್ವೆಂಟಿ-20 ಆಗಿತ್ತು. 2006-07ರಲ್ಲಿ ಪಂಜಾಬ್‌ನ್ನು ಮಣಿಸಿದ ತಮಿಳುನಾಡು ಚೊಚ್ಚಲ ಚಾಂಪಿಯನ್ ಆಗಿತ್ತು. 2009-10ರಲ್ಲಿ ಇದು ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿ ಆಗಿ ಪುನರ್‌ನಾಮಕರಣಗೊಂಡಿತ್ತು.

2018-19ರಲ್ಲಿ 10ನೇ ಆವೃತ್ತಿಯಲ್ಲಿ ಮಹಾರಾಷ್ಟ್ರ ತಂಡವನ್ನು ಮಣಿಸಿದ್ದ ಕರ್ನಾಟಕ ಮೊದಲ ಬಾರಿ ಪ್ರಶಸ್ತಿಯನ್ನು ಬಾಚಿಕೊಂಡಿತ್ತು.

 ► ಪಂದ್ಯದ ಸಮಯ: ರಾತ್ರಿ 7:00 ಗಂಟೆಗೆ ಆರಂಭ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News