ಹಿಂದಿನ ದಾಖಲೆಯನ್ನು ಉತ್ತಮಪಡಿಸಿಕೊಂಡ ಪೇಸ್

Update: 2019-11-30 18:12 GMT

ನೂರ್ ಸುಲ್ತಾನ್(ಕಝಖ್‌ಸ್ತಾನ), ನ.30: ಭಾರತದ ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ತಮ್ಮ 44ನೇ ಡಬಲ್ಸ್ ಪಂದ್ಯವನ್ನು ಗೆಲ್ಲುವ ಮೂಲಕ ತಮ್ಮದೇ ಆದ ಡೇವಿಸ್ ಕಪ್ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.

ಜೀವನ್ ನೆಡುಂಚೆಝಿಯಾನ್ ಅವರೊಂದಿಗೆ ಕಣಕ್ಕಿಳಿದ ಪೇಸ್ ಡೇವಿಸ್ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಜೀವನ್ ಮತ್ತು ಪೇಸ್ ಪಾಕಿಸ್ತಾನದ ಜೋಡಿಯನ್ನು ಮಣಿಸಿತು. 4-0 ಮುನ್ನಡೆಯೊಂದಿಗೆ ಭಾರತ 2020ರ ಕ್ವಾಲಿಫೈಯರ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲ್ಲಿ ಯಶಸ್ವಿಯಾಗಿದೆ.

ಪಾಕಿಸ್ತಾನದ ಹದಿಹರೆಯದ ಜೋಡಿ ಮುಹಮ್ಮದ್ ಶುಐಬ್ ಮತ್ತು ಹುಫೈಝಾ ಅಬ್ದುಲ್ ರಹ್ಮಾನ್ ಅವರು ಪೇಸ್-ಜೀವನ್ ಜೋಡಿಯ ಮುಂದೆ ಯಾವುದೇ ಹೋರಾಟ ನೀಡದೆ ಶರಣಾಯಿತು. ಕೇವಲ 53 ನಿಮಿಷಗಳ ಆಟದಲ್ಲಿ ಪಾಕ್‌ನ ಮುಹಮ್ಮದ್ ಶುಐಬ್ ಮತ್ತು ಅಬ್ದುಲ್ ರಹ್ಮಾನ್ ವಿರುದ್ಧ ಪೇಸ್ ಮತ್ತು ಜೀವನ್ 6-1, 6-3 ಅಂತರದಿಂದ ಗೆಲುವಿನ ನಗೆ ಬೀರಿದರು.

ಕಳೆದ ವರ್ಷ ಪೇಸ್ ತನ್ನ 43ನೇ ಪಂದ್ಯವನ್ನು ಗೆದ್ದಾಗ ಡೇವಿಸ್ ಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಡಬಲ್ಸ್ ಆಟಗಾರ ಎಂಬ ದಾಖಲೆ ಬರೆದಿದ್ದರು. ಚೀನಾ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ಇಟಲಿಯ ಶ್ರೇಷ್ಠ ಟೆನಿಸ್ ಆಟಗಾರ ನಿಕೋಲಾ ಪಿಯಟ್ರಂಗೇಲಿಯನ್ನು ದಾಖಲೆಯನ್ನು ಹಿಂದಿಕ್ಕಿದ್ದರು. 46 ರ ಹರೆಯದ ಪೇಸ್ 56 ಡೇವಿಸ್ ಕಪ್‌ಪಂದ್ಯಗಳಲ್ಲಿ 43ನೇ ಗೆಲುವು ದಾಖಲಿಸಿದ್ದರು. ಆದರೆ ಪಿಯಟ್ರಂಗೆಲಿ ತಮ್ಮ 42ನೇ ಗೆಲುವಿಗಾಗಿ 66 ಪಂದ್ಯಗಳಲ್ಲಿ ಆಡಿದ್ದರು. ‘‘ಇದು ನನ್ನ 44ನೇ ಗೆಲುವು. ಆದರೆ ಇದು ನನ್ನ ಮೊದಲ ಗೆಲುವು ಎಂದು ಭಾವಿಸುವೆ. ನನ್ನ ಎಲ್ಲಾ ಗೆಲುವುಗಳು ವಿಶೇಷ. ದಾಖಲೆ ಪುಸ್ತಕಗಳಲ್ಲಿ ಭಾರತದ ಹೆಸರನ್ನು ಬರೆಯುವುದು ನನಗೆ ವಿಶೇಷವಾಗಿದೆ ಮತ್ತು ನಾನು ಅದರ ಬಗ್ಗೆ ಉತ್ಸುಕನಾಗಿದ್ದೇನೆ. ಜೀವನ್ ತನ್ನ ಮೊದಲ ಪಂದ್ಯವನ್ನು ನನ್ನೊಂದಿಗೆ ಆಡುವಾಗ ನಾನು ಹಿರಿಯ ಆಟಗಾರನಾಗಿ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೆ’’ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಪೇಸ್ ತಿಳಿಸಿದರು.

‘‘ವಿಶಾಲ ಹೃದಯದ ಜೀವನ್ ದೇಶದ ಪರ ಆಡುತ್ತಾ ವಿಜಯದ ಪತಾಕೆಯನ್ನು ಎತ್ತಿ ಹಿಡಿಯಲು ಇಷ್ಟಪಡುತ್ತಾರೆ. ಅವರೊಂದಿಗೆ ಟೆನಿಸ್ ಕೋರ್ಟ್ ನಲ್ಲಿ ಆಡಲು ನಾನು ಹೆಮ್ಮೆಪಡುತ್ತೇನೆ. ಮತ್ತೆ ಭಾರತದ ಪರ ಆಡಲು ವಾಪಸಾದ ಹಿನ್ನೆಲೆಯಲ್ಲಿ ತುಂಬಾ ಖುಷಿಯಾಗಿದೆ ’’ಎಂದು 18 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳ ಒಡೆಯ ಪೇಸ್ ಹೇಳಿದರು.

57 ಪಂದ್ಯಗಳಲ್ಲಿ 44 ಗೆಲುವು ದಾಖಲಿಸಿರುವ ಪೇಸ್ ದಾಖಲೆಯನ್ನು ಮುರಿಯುವುದು ಈಗಿನ ಪರಿಸ್ಥಿತಿಯಲ್ಲಿ ಯಾರಿಗೂ ಕಷ್ಟ. ಸಕ್ರಿಯ ಡಬಲ್ಸ್ ಆಟಗಾರರಲ್ಲಿ ಯಾರೂ ಟಾಪ್ -10 ಪಟ್ಟಿಯಲ್ಲಿಲ್ಲ. ಮೂರನೇ ಸ್ಥಾನದಲ್ಲಿರುವ ಬೆಲಾರಸ್‌ನ ಮ್ಯಾಕ್ಸ್ ಮಿರ್ನಿ 36 ಗೆಲುವುಗಳನ್ನು ದಾಖಲಿಸಿದ್ದಾರೆ. ಆದರೆ 2018 ರಿಂದ ಅವರು ಆಡಿಲ್ಲ.

ಡಬಲ್ಸ್‌ನಲ್ಲಿ ಪೇಸ್ ಅಗ್ರಸ್ಥಾನದಲ್ಲಿದ್ದಾರೆ. ಅವರ ಗೆಲುವಿನ ದಾಖಲೆ 92-35. ಈಗ ಅವರು ಸಿಂಗಲ್ಸ್‌ನಲ್ಲಿ 48 ಸೇರಿದಂತೆ ಒಟ್ಟು 92 ವಿಜಯದ ದಾಖಲೆ ಹೊಂದಿದ್ದಾರೆ. 92-28 ಗೆಲುವು-ಸೋಲಿನ ದಾಖಲೆಯನ್ನು ಹೊಂದಿರುವ ಸ್ಪೇನ್‌ನ ಮ್ಯಾನುಯೆಲ್ ಸ್ಯಾಂಟಾನ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಶನಿವಾರ ನಡೆದ ರಿವರ್ಸ್ ಸಿಂಗಲ್ಸ್‌ನಲ್ಲಿ ಸುಮಿತ್ ನಾಗಲ್ ಅವರು ಯೂಸಫ್ ಖಲೀಲ್‌ರನ್ನು 6-1, 6-0 ಅಂತರದಿಂದ ಸೋಲಿಸಿದರು. ‘‘ಇದು ಸುಲಭವಾದ ಗೆಲುವು. ಅವರು ಯುವ ಆಟಗಾರರು, ಅನನುಭವಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇಂದು ನನ್ನ ವರ್ಷದ ಕೊನೆಯ ಪಂದ್ಯವಾಗಿತ್ತು. ಇದು ನನಗೆ ಅಪೂರ್ವ ವರ್ಷವಾಗಿದೆ’’ ಎಂದು ನಾಗಲ್ ಗೆಲುವಿನ ನಂತರ ಹೇಳಿದರು.

ಭಾರತವು ಫೆಬ್ರವರಿ 2014ರ ಬಳಿಕ ಮೊದಲ ಬಾರಿ ಎಲ್ಲ 4 ಪಂದ್ಯಗಳನ್ನು ಜಯಿಸಿದೆ. ಅಂದು ಚೈನೀಸ್ ತೈಪೆಯನ್ನು 5-0 ಅಂತರದಿಂದ ಮಣಿಸಿತ್ತು.

 ಭಾರತದ ನಾನ್ ಪ್ಲೇಯಿಂಗ್ ಕ್ಯಾಪ್ಟನ್ ರೋಹಿತ್ ರಾಜ್ಪಾಲ್ ತಂಡದ ಗೆಲುವನ್ನು ದೇಶದ ಸಶಸ್ತ್ರ ಪಡೆಗಳಿಗೆ ಅರ್ಪಿಸಿದರು.

‘‘ನಾವು ಈ ವಿಷಯವನ್ನು ನಮ್ಮ ನಡುವೆ ಚರ್ಚಿಸಿದ್ದೇವೆ, ನಾವೆಲ್ಲರೂ ಗೆಲುವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇವೆ, ಅದರಲ್ಲೂ ವಿಶೇಷವಾಗಿ ನಮ್ಮ ಕುಟುಂಬಗಳನ್ನು ರಕ್ಷಿಸುವಲ್ಲಿ ಗಡಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಈ ಗೆಲುವು ಅರ್ಪಿಸುವೆವು. ಆದ್ದರಿಂದ ನಾವು ಈ ಗೆಲುವನ್ನು ಭಾರತೀಯ ಸೇನೆಗೆ ಅರ್ಪಿಸುತ್ತೇವೆ’’ ಎಂದು ರಾಜ್ಪಾಲ್ ಹೇಳಿದರು.

ಮೊದಲು ಡೇವಿಸ್ ಕಪ್ ಪಂದ್ಯಗಳು ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿತ್ತು. ಆದರೆ ಭದ್ರತೆಯ ಕಾರಣಕ್ಕಾಗಿ ಪಾಕಿಸ್ತಾನದ ಅಗ್ರ ಆಟಗಾರರಾದ ಐಸಮ್-ಉಲ್-ಹಕ್ ಖುರೇಶಿ ಪಂದ್ಯಗಳನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸುವ ಐಟಿಎಫ್ ನಿರ್ಧಾರವನ್ನು ವಿರೋಧಿಸಿ ಕೂಟದಿಂದ ಹೊರಗುಳಿದಿದ್ದರು.

ಮಾರ್ಚ್ 6-7ರಂದು ನಡೆಯಲಿರುವ ಅರ್ಹತಾ ಸುತ್ತಿನಲ್ಲಿ ಭಾರತ ಈಗ ವಿಶ್ವದ ನಂ.2 ಕ್ರೊಯೇಷಿಯಾ ತಂಡವನ್ನು ಎದುರಿಸಲಿದೆ. ಡೇವಿಸ್ ಕಪ್ ಫೈನಲ್‌ಗೆ ಅರ್ಹತಾ 12 ಸ್ಥಾನಗಳಲ್ಲಿ ಒಂದನ್ನು ಗೆಲ್ಲುವುದಕ್ಕಾಗಿ 24 ರಾಷ್ಟ್ರಗಳ ತಂಡಗಳು ಹಣಾಹಣಿ ನಡೆಸಲಿವೆ. ಸೋಲು ಅನುಭವಿಸುವ 12 ರಾಷ್ಟ್ರಗಳು ಸೆಪ್ಟೆಂಬರ್ 2020ರಲ್ಲಿ ವಿಶ್ವ ಗುಂಪು-1 ಕೂಟದಲ್ಲಿ ಸ್ಪರ್ಧಿಸಲಿದ್ದು, ವಿಜೇತ ರಾಷ್ಟ್ರಗಳು ಈಗಾಗಲೇ ಫೈನಲ್‌ಗೆ ಅರ್ಹತೆ ಪಡೆದ ಆರು ರಾಷ್ಟ್ರಗಳ ಜೊತೆ ಸೇರಿಕೊಳ್ಳಲಿವೆ. 2019ರ ಸೆಮಿಫೈನಲಿಸ್ಟ್ ತಂಡಗಳು ಕೆನಡಾ, ಗ್ರೇಟ್ ಬ್ರಿಟನ್, ರಶ್ಯ ಮತ್ತು ಸ್ಪೇನ್ ಮತ್ತು ವೈಲ್ಡ್ ಕಾರ್ಡ್ ಪಡೆದ ತಂಡಗಳು ಫ್ರಾನ್ಸ್ ಹಾಗೂ ಸೆರ್ಬಿಯಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News