ಪಾಕಿಸ್ತಾನ ವಿರುದ್ಧ ಅಹರ್ನಿಶಿ ಟೆಸ್ಟ್ ಆಸ್ಟ್ರೇಲಿಯ ಬಿಗಿ ಹಿಡಿತ

Update: 2019-11-30 18:19 GMT

ಅಡಿಲೇಡ್, ನ.30: ಡೇವಿಡ್ ವಾರ್ನರ್ ಅವರ ತ್ರಿಶತಕದ ಸಾಹಸದ ಸಹಾಯದಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನ ವಿರುದ್ಧ ಇಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ.

 ಎರಡನೇ ದಿನದಾಟವಾದ ಶನಿವಾರ ಆಸ್ಟ್ರೇಲಿಯ 3 ವಿಕೆಟ್‌ಗಳ ನಷ್ಟಕ್ಕೆ 589 ರನ್ ಗಳಿಸಿದ ತಕ್ಷಣ ನಾಯಕ ಟಿಮ್ ಪೈನ್ ಇನಿಂಗ್ಸ್ ಡಿಕ್ಲೇರ್ ಮಾಡಿದರು. ವಾರ್ನರ್ ವೈಯಕ್ತಿಕ ಶ್ರೇಷ್ಠ ಸ್ಕೋರ್ ಗಳಿಸಿದರು. ಇನ್ನು 65 ರನ್ ಗಳಿಸಿದ್ದರೆ ವಿಂಡೀಸ್‌ನ ಐಕಾನ್ ಬ್ರಿಯಾನ್ ಲಾರಾ ಹೆಸರಲ್ಲಿದ್ದ ಸಾರ್ವಕಾಲಿಕ ಗರಿಷ್ಠ ಟೆಸ್ಟ್ ಸ್ಕೋರ್(ಔಟಾಗದೆ 400)ಮುರಿಯುವ ಅವಕಾಶ ಇತ್ತು. ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ಮೊತ್ತಕ್ಕೆ ಉತ್ತರಿಸಹೊರಟಿರುವ ಪಾಕಿಸ್ತಾನ ಮಿಚೆಲ್ ಸ್ಟಾರ್ಕ್(4-22) ದಾಳಿಗೆ ಸಿಲುಕಿ ಮೊದಲ ಇನಿಂಗ್ಸ್ ನಲ್ಲಿ 96 ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಬಾಬರ್ ಆಝಂ (ಔಟಾಗದೆ 43,67 ಎಸೆತ, 6 ಬೌಂಡರಿ) ಹಾಗೂ ಯಾಸಿರ್ ಶಾ(4)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆಸ್ಟ್ರೇಲಿಯದಲ್ಲಿ ಸತತ 13 ಟೆಸ್ಟ್ ಸರಣಿಗಳನ್ನು ಸೋತಿರುವ ಪ್ರವಾಸಿ ಪಾಕ್ ತಂಡ ದೀರ್ಘ ಸಮಯದಿಂದ ಕಳಪೆ ಫಾರ್ಮ್ ನಲ್ಲಿದ್ದು ಆಸೀಸ್ ವಿರುದ್ಧದ ಸರಣಿಯಲ್ಲಿ 2-0 ಸೋಲಿನಿಂದ ಪಾರಾಗಲು ಎದುರು ನೋಡುತ್ತಿದೆ.

ಆಸ್ಟ್ರೇಲಿಯ 1 ವಿಕೆಟ್ ನಷ್ಟಕ್ಕೆ 302 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಪಾಕ್ ತಂಡ ಮಾರ್ನಸ್ ಲ್ಯಾಬುಶೆನ್(162) ಹಾಗೂ ಸ್ಮಿತ್(36) ವಿಕೆಟ್‌ನ್ನು ಬೇಗನೆ ಉರುಳಿಸಿತು. ಸ್ಮಿತ್ 126ನೇ ಇನಿಂಗ್ಸ್‌ನಲ್ಲಿ 7,000 ರನ್ ಪೂರೈಸುವ ಮೂಲಕ ಇಂಗ್ಲೆಂಡ್‌ನ ಹ್ಯಾಮಂಡ್ ಹೆಸರಲ್ಲಿದ್ದ 73 ವರ್ಷಗಳ ಹಳೆಯ ದಾಖಲೆ ಮುರಿದರು. 6,996 ಟೆಸ್ಟ್ ರನ್ ಗಳಿಸಿದ್ದ ಆಸೀಸ್ ದಂತಕತೆ ಡೊನಾಲ್ಡ್ ಬ್ರಾಡ್ಮನ್ ದಾಖಲೆಯನ್ನು ಸ್ಮಿತ್ ಮುರಿದಿದ್ದಾರೆ. ವಾರ್ನರ್(166) ಹಾಗೂ ಲ್ಯಾಬುಶೆನ್(126)ತಮ್ಮ ಮ್ಯಾರಥಾನ್ ಜೊತೆಯಾಟದಲ್ಲಿ ಇಂದು 67 ರನ್ ಸೇರಿಸಿದರು. ಶಾಹೀನ್ ಅಫ್ರಿದಿ ಅವರು ಲ್ಯಾಬುಶೆನ್‌ರನ್ನು ಕ್ಲೀನ್‌ಬೌಲ್ಡ್ ಮಾಡಿ ಈ ಜೋಡಿಯನ್ನು ಬೇರ್ಪಡಿಸಿದರು. ಸತತ 2ನೇ ಶತಕ ಸಿಡಿಸಿದ್ದ ಲ್ಯಾಬುಶೆನ್ 2ನೇ ವಿಕೆಟ್ ಜೊತೆಯಾಟದಲ್ಲಿ ವಾರ್ನರ್‌ರೊಂದಿಗೆ 361 ರನ್ ಸೇರಿಸಿದರು. ಇದು ಆಸೀಸ್ ಆಟಗಾರರು 2ನೇ ವಿಕೆಟ್‌ಗೆ ಗಳಿಸಿದ 2ನೇ ಗರಿಷ್ಠ ಮೊತ್ತದ ಜೊತೆಯಾಟವಾಗಿದೆ. ವಾರ್ನರ್ ತನ್ನ 81ನೇ ಟೆಸ್ಟ್ ಪಂದ್ಯದಲ್ಲಿ ಅಫ್ರಿದಿ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿ ವೃತ್ತಿಜೀವನದ ದ್ವಿತೀಯ ದ್ವಿಶತಕ ಪೂರೈಸಿದರು. 226 ರನ್ ಗಳಿಸಿದ್ದಾಗ ಔಟಾಗುವುದರಿಂದ ಪಾರಾಗಿದ್ದ ವಾರ್ನರ್ 2015ರಲ್ಲಿ ಪರ್ತ್‌ನಲ್ಲಿ ಗಳಿಸಿದ್ದ ತನ್ನ ಗರಿಷ್ಠ ವೈಯಕ್ತಿಕ ಸ್ಕೋರ್(253 ರನ್)ದಾಖಲೆಯನ್ನು ಉತ್ತಮಪಡಿಸಿಕೊಂಡರು. 335 ರನ್ ಗಳಿಸಿದ ವಾರ್ನರ್ 1998ರಲ್ಲಿ ಪಾಕ್ ವಿರುದ್ಧ 334 ರನ್ ಗಳಿಸಿದ್ದ ಮಾಜಿ ನಾಯಕ ಮಾರ್ಕ್ ಟೇಲರ್ ಹಾಗೂ 1930ರಲ್ಲಿ ಇಂಗ್ಲೆಂಡ್ ವಿರುದ್ಧ 334 ರನ್ ಗಳಿಸಿದ್ದ ಬ್ರಾಡ್ಮನ್ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆ ಮುರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News