ಕೊಹ್ಲಿ ಮತ್ತೆ ನಂ.1, ಅಗ್ರ 10ರಲ್ಲಿ ಶಮಿ

Update: 2019-12-04 17:58 GMT

ಹೊಸದಿಲ್ಲಿ, ಡಿ.4: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮತ್ತೊಮ್ಮೆ ನಂ.1 ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ವೇಗಿ ಮುಹಮ್ಮದ್ ಶಮಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.

ಇಂದು ಪ್ರಕಟಗೊಂಡಿರುವ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಕ್ರಮವಾಗಿ 4ನೇ ಮತ್ತು 6ನೇ ಸ್ಥಾನ ಪಡೆದಿದ್ದಾರೆ.

ಈಡನ್ ಗಾರ್ಡನ್ಸ್‌ನಲ್ಲಿ ಕಳೆದ ತಿಂಗಳು ಬಾಂಗ್ಲಾದೇಶ ತಂಡದ ವಿರುದ್ಧ ನಡೆದ ಡೇ-ನೈಟ್ ಟೆಸ್ಟ್‌ನಲ್ಲಿ ಆಕರ್ಷಕ 136 ರನ್ ಗಳಿಸಿದ ವಿರಾಟ್ ಕೊಹ್ಲಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ಸ್ಮಿತ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಪಾಕಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ ಸ್ಮಿತ್ ಅವರು 20ರ ಸರಾಸರಿಯಂತೆ ಕೇವಲ 40 ರನ್ ಗಳಿಸಿದ್ದರು.ಈ ಕಾರಣದಿಂದಾಗಿ ಅವರು ರ‍್ಯಾಂಕಿಂಗ್‌ ನಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

 ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಪಾಕಿಸ್ತಾನದ ವಿರುದ್ಧದ ಆಡಿಲೇಡ್ ಟೆಸ್ಟ್ ನಲ್ಲಿ ಔಟಾಗದೆ 335 ರನ್ ಗಳಿಸಿದ್ದರು. ತ್ರಿಶತಕದ ನೆರವಿನಲ್ಲಿ ಅವರು 5ನೇ ಸ್ಥಾನವನ್ನಲಂಕರಿಸಿದ್ದಾರೆ. ಅವರ ತಂಡದ ಮಾರ್ನುಸ್ ಲಾಬುಶೇನ್ ಎರಡು ಶತಕ ದಾಖಲಿಸಿದ್ದರು. ಅವರು 8ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

 ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಕೆಲವು ಸಮಯಗಳ ಹಿಂದೆ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದರು. ನ್ಯೂಝಿಲ್ಯಾಂಡ್ ವಿರುದ್ಧ ಹ್ಯಾಮಿಲ್ಟನ್ ಟೆಸ್ಟ್‌ನಲ್ಲಿ ದ್ವಿಶತಕ (226) ಗಳಿಸುವ ಮೂಲಕ ಫಾರ್ಮ್‌ಗೆ ಮರಳಿದ್ದರು. ಅವರು ಇದೀಗ 7ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಭಾರತದ ಮುಹಮ್ಮದ್ ಶಮಿ ವೇಗದ ಬೌಲಿಂಗ್ ವಿಭಾಗದಲ್ಲಿ ಮಿಂಚುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಒಟ್ಟು 5 ಟೆಸ್ಟ್‌ಗಳಲ್ಲಿ 22 ವಿಕೆಟ್ ಉಡಾಯಿಸಿ ಇದೀಗ 10ನೇ ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 5 ಟೆಸ್ಟ್‌ಗಳಲ್ಲಿ 21 ವಿಕೆಟ್ ಪಡೆದು 9ನೇ ಸ್ಥಾನ , ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಜಸ್‌ಪ್ರೀತ್ ಬುಮ್ರಾ 5ನೇ ಸ್ಥಾನ ಉಳಿಸಿಕೊಂಡಿದ್ದಾರೆ.

 ಟೆಸ್ಟ್ ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ ನಲ್ಲಿ ಅಶ್ವಿನ್ 5ನೇ ಮತ್ತು ರವೀಂದ್ರ ಜಡೇಜ 2ನೇ ಸ್ಥಾನ , ಆಸ್ಟ್ರೇಲಿಯದ ಮಿಚೆಲ್ ಸ್ಟಾರ್ಕ್ 6ನೇ ಸ್ಥಾನ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News