ಟಾಪ್ಸ್ ಯೋಜನೆಯಿಂದ ನೀರಜಾ ಫೋಗಟ್ ಔಟ್ ದೀಪಿಕಾ ಕುಮಾರಿ, ಚಿಂಕಿ ಯಾದವ್‌ಗೆ ಸ್ಥಾನ

Update: 2019-12-05 17:59 GMT

ಹೊಸದಿಲ್ಲಿ, ಡಿ.5: ಡೋಪಿಂಗ್‌ನಿಂದ ಕಳಂಕಿತರಾಗಿರುವ ಮಹಿಳಾ ಬಾಕ್ಸರ್ ನೀರಜಾ ಫೋಗಟ್ ಅವರನ್ನು ಗುರುವಾರ ಕ್ರೀಡಾ ಸಚಿವಾಲಯ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ(ಟಾಪ್ಸ್) ಯೋಜನೆಯಿಂದ ಕೈಬಿಟ್ಟಿದೆ. ಭಾರತ 2020ರ ಟೋಕಿಯೊ ಗೇಮ್ಸ್ ನಲ್ಲಿ ಕೋಟಾ ಸ್ಥಾನ ಪಡೆಯಲು ನಿರ್ಣಾಯಕ ಪಾತ್ರವಹಿಸಿರುವ ಆರ್ಚರಿ ದೀಪಿಕಾ ಕುಮಾರಿ ಅವರನ್ನು ಟಾ ಪ್ಸ್‌ಗೆ ಸೇರಿಸಿಕೊಳ್ಳಲಾಗಿದೆ. ಈ ವರ್ಷಾರಂಭದಲ್ಲಿ 25 ಮೀ.ಪಿಸ್ತೂಲ್ ಇವೆಂಟ್‌ನಲ್ಲಿ ಒಲಿಂಪಿಕ್ಸ್ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಶೂಟರ್ ಚಿಂಕಿ ಯಾದವ್ ಅವರು ಹಿರಿಯ ಶೂಟರ್ ತೇಜಸ್ವಿನಿ ಸಾವಂತ್, ಐಶ್ವರ್ಯ ಪ್ರತಾಪ್ ಸಿಂಗ್ ಥೋಮರ್ ಹಾಗೂ ಮೈರಾಜ್ ಅಹ್ಮದ್ ಖಾನ್ ಜೊತೆ ಟಾಪ್ಸ್ ಲಿಸ್ಟ್ ಗೆ ಸೇರಿಕೊಂಡಿದ್ದಾರೆ.

ಮಹಿಳೆಯರ ರಿಕರ್ವ್ ಸ್ಪರ್ಧೆಯಲ್ಲಿ ವೈಯಕ್ತಿಕ ಒಲಿಂಪಿಕ್ಸ್ ಕೋಟಾ ಭರ್ತಿ ಮಾಡಿರುವ ಮಾಜಿ ವಿಶ್ವದ ನಂ.1 ದೀಪಿಕಾ ಕುಮಾರಿ ಹಾಗೂ ಅಂಕಿತಾ ಭಕ್ತ್, ಹಿರಿಯ ಆಟಗಾರ್ತಿ ಎಲ್.ಬೊಂಬ್ಯಾಲದೇವಿ ಯೋಜನೆಗೆ ಸೇರ್ಪಡೆಯಾಗಿದ್ದಾರೆ.

ನಾಡಾದಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಬಾಕ್ಸರ್ ನೀರಜಾ ಪೋಗಟ್‌ರನ್ನು ಟಾಪ್ಸ್ ಸ್ಕೀಮ್‌ನಿಂದ ಹೊರಗಿಡಲಾಗಿದೆ. ಶೂಟರ್‌ಗಳಾದ ರವಿ ಕುಮಾರ್ ಹಾಗೂ ಓಂ ಪ್ರಕಾಶ್ ಮಿಥಾರ್ವಲ್‌ರನ್ನು ಯೋಜನೆಯಿಂದ ಕೈಬಿಡಲು ಸಮಿತಿ ನಿರ್ಧರಿಸಿದೆ ಎಂದು ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್) ಪ್ರಕಟನೆಯೊಂದರಲ್ಲಿ ತಿಳಿಸಿದೆ. ಭಾರತದ ಪುರುಷರ ಜಾವೆಲಿನ್ ಎಸೆತಗಾರರಾದ ಶಿವಪಾಲ್ ಸಿಂಗ್ ಹಾಗೂ ರೋಹಿತ್ ಯಾದವ್‌ರನ್ನು ಡೆವಲಪ್‌ಮೆಂಟ್ ಗ್ರೂಪ್‌ನಿಂದ ಹೊರಗಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News