ಮನ್‌ಪ್ರೀತ್ ಸಿಂಗ್ ಎಫ್‌ಐಎಚ್ ವರ್ಷದ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನ

Update: 2019-12-06 18:02 GMT

ಯಾಮಿ ಲೌಸನ್ನೆ, ಡಿ.6: ಟೋಕಿಯೊ ಒಲಿಂಪಿಕ್ಸ್‌ಗೆ ತೇರ್ಗಡೆಯಾಗಿರುವ ಭಾರತದ ಪುರುಷರ ಹಾಕಿ ತಂಡವನ್ನು ಮುನ್ನಡೆಸಿದ್ದ ನಾಯಕ ಮನ್‌ಪ್ರೀತ್ ಸಿಂಗ್ ಅವರನ್ನು ಶುಕ್ರವಾರ ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್)ಪ್ರತಿಷ್ಠಿತ ವರ್ಷದ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

ಇದೇ ವೇಳೆ ಭಾರತದ ಇಬ್ಬರು ಆಟಗಾರರಾದ ವಿವೇಕ್ ಪ್ರಸಾದ್ ಮತ್ತು ಲಾಲ್ರೆಮ್ಸಿಯಾಮಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಎಫ್‌ಐಎಚ್ ರೈಸಿಂಗ್ ಸ್ಟಾರ್ ಆಫ್ ದಿ ಇಯರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

242 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 27 ವರ್ಷದ ಮನ್‌ಪ್ರೀತ್ ಸಿಂಗ್ ಭಾರತದ ಮಿಡ್‌ಫೀಲ್ಡ್ ಆಟಗಾರ. ಅವರ ನಾಯಕತ್ವದಲ್ಲಿ ಭಾರತ ಕಳೆದ ತಿಂಗಳು ಭುವನೇಶ್ವರದಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ರಶ್ಯವನ್ನು 11-3 ಗೋಲುಗಳಿಂದ ಮಣಿಸಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಿತು.

   

19 ವರ್ಷದ ಪ್ರಸಾದ್ ಕಳೆದ ವರ್ಷ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಭಾರತ ಈ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದೆ. ಈ ವರ್ಷದ ಎಫ್‌ಐಎಚ್ ಸರಣಿ ಫೈನಲ್‌ನಲ್ಲಿ ಅವರು ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಫಾರ್ವರ್ಡ್ ಆಗಿರುವ 19ರ ಹರೆಯದ ಲಾಲ್ರೆಮ್ಸಿಯಾಮಿ ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತ ಮಹಿಳಾ ತಂಡದ ಸದಸ್ಯೆ. ಪ್ರತಿಷ್ಠಿತ ಎಫ್‌ಐಎಚ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿಗೆ ಆಸ್ಟ್ರೇಲಿಯಾದ ಎಡ್ಡಿ ಒಕೆಂಡೆನ್ ಮತ್ತು ಅರಾನ್ ಝಾಲೆವಿಸ್ಕಿ , ಅರ್ಜೆಂಟೀನದ ಲೂಕಾಸ್ ವಿಲಾ ಮತ್ತು ಬೆಲ್ಜಿಯಂನ ಆರ್ಥರ್ ವ್ಯಾನ್ ಡೋರೆನ್ ಮತ್ತು ವಿಕ್ಟರ್ ವೆಗ್ನೆಜ್ ನಾಮನಿರ್ದೇಶನಗೊಂಡಿರುವ ಇತರ ಆಟಗಾರರು.

32 ವರ್ಷದ ಓಕೆಂಡೆನ್ 340 ಪಂದ್ಯಗಳನ್ನು ಆಡಿರುವ ಅನುಭವಿ ಮತ್ತು ಝಾಲೆವಿಸ್ಕಿ ತಮ್ಮ ದೇಶದ ಮಲ್ಟಿ-ಪ್ಲೇಯರ್ ಕ್ಯಾಪ್ಟನ್ಸ್ ನಿಯಮದಂತೆ ಆಸ್ಟ್ರೇಲಿಯ ತಂಡವನ್ನು ಮುನ್ನಡೆಸಿದ್ದರು. ಎಫ್‌ಐಎಚ್ ಪ್ರೊ ಲೀಗ್ 2019 ಆವೃತ್ತಿಯಲ್ಲಿ ಚಿನ್ನ ಗೆದ್ದ ತಂಡದ ಸದಸ್ಯರು.

ಝಾಲೆವಿಸ್ಕಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದರು. ವಿಲಾ 2016ರ ರಿಯೊ ಒಲಿಂಪಿಕ್ಸ್ ಮತ್ತು 2019 ಪ್ಯಾನ್ ಅಮೆರಿಕನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಅರ್ಜೆಂಟೀನ ತಂಡದಲ್ಲಿದ್ದರು.

ಬೆಲ್ಜಿಯಂ ಜೋಡಿ ವ್ಯಾನ್ ಡೊರೆನ್ ಮತ್ತು ವೆಗ್ನೆಜ್ ತಮ್ಮ ದೇಶದ 2018 ರ ವಿಶ್ವಕಪ್ ಪ್ರಶಸ್ತಿ ಗೆಲುವು ಮತ್ತು 2019ರ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಎರಡನೇ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶ್ವದಾದ್ಯಂತ ರಾಷ್ಟ್ರೀಯ ಸಂಸ್ಥೆಗಳು , ಆಟಗಾರರು, ಅಭಿಮಾನಿಗಳು ಮತ್ತು ಪತ್ರಕರ್ತರು ಪ್ರಶಸ್ತಿಗೆ ಮತ ಚಲಾಯಿಸಬಹುದು.

ರಾಷ್ಟ್ರೀಯ ಹಾಕಿ ಸಂಸ್ಥೆಗಳ ಮತಗಳು - ಕೆಲವು ಅಂತರ್‌ರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ತರಬೇತುದಾರರ ಮತಗಳನ್ನು ಒಳಗೊಂಡಿರುತ್ತದೆ - ಒಟ್ಟಾರೆ ಫಲಿತಾಂಶದ ಶೇಕಡಾ 50 ರಷ್ಟನ್ನು ಎಣಿಸಲಾಗುವುದು, ಆದರೆ ಅಭಿಮಾನಿಗಳು ಮತ್ತು ಆಟಗಾರರು (25 ಶೇಕಡಾ), ಮತ್ತು ಮಾಧ್ಯಮಗಳು (ಶೇಕಡಾ 25) ಮತಚಲಾಯಿಸಿ ಪ್ರಶಸ್ತಿಗೆ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ.

ಜನವರಿ 17, 2020 ರವರೆಗೆ ಮತದಾನ ಮುಕ್ತವಾಗಿದೆ. 2019ರ ಎಲ್ಲಾ ಎಫ್‌ಐಎಚ್ ಹಾಕಿ ಸ್ಟಾರ್ಸ್ ಪ್ರಶಸ್ತಿಗಳ ವಿಜೇತರನ್ನು ಸಹ ಒಳಗೊಂಡಿದೆ, ಇದರಲ್ಲಿ ವರ್ಷದ ಎಫ್‌ಐಎಚ್ ಕೋಚ್ ಪ್ರಶಸ್ತಿಯನ್ನು ಫೆಬ್ರವರಿ 2020ರಲ್ಲಿ ಘೋಷಿಸಲಾಗುವುದು ಎಂದು ಎಫ್‌ಐಎಚ್ ಹೇಳಿದೆ. ವರ್ಷದ ಪುರುಷರ ಮತ್ತು ಮಹಿಳೆಯರ ಎಫ್‌ಐಎಚ್ ತರಬೇತುದಾರರನ್ನು ಮತ ಚಲಾಯಿಸಲಾಗುವುದಿಲ್ಲ ಆದರೆ ಎಫ್‌ಐಎಚ್ ಸಮಿತಿ ಆಯ್ಕೆ ಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News