ಇಂದು ವಿಂಡೀಸ್ ವಿರದ್ಧ ಎರಡನೇ ಟ್ವೆಂಟಿ-20 ಪಂದ್ಯ

Update: 2019-12-07 17:45 GMT

ತಿರುವನಂತಪುರ, ಡಿ.7: ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಭಾರತ ಕ್ರಿಕೆಟ್ ತಂಡ ರವಿವಾರ ಇಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲೂ ಗೆಲುವಿನ ಅಭಿಯಾನ ಮುಂದುವರಿಸುವ ಯೋಜನೆಯಲ್ಲಿದೆ.

ಭಾರತವು ಮೊದಲ ಪಂದ್ಯದಲ್ಲಿ ತನ್ನ ಅಪೂರ್ವ ಬ್ಯಾಟಿಂಗ್‌ನ್ನು ಪ್ರದರ್ಶಿಸಿ ಗೆಲುವು ದಾಖಲಿಸಿತ್ತು. ಆದರೆ ಬೌಲಿಂಗ್ ಕಳಪೆಯಾಗಿತ್ತು. ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗಗಳಲ್ಲಿ ಸುಧಾರಿತ ಪ್ರದರ್ಶನವನ್ನು ನೀಡಬೇಕಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧ ಕಳೆದ 13 ತಿಂಗಳುಗಳಲ್ಲಿ ಭಾರತವು ಆರು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಆತಿಥೇಯರು ಪ್ರತಿ ಬಾರಿಯೂ ಗೆಲುವಿನ ನಗೆ ಬೀರಿದ್ದಾರೆ.

ಇದೀಗ ಭಾರತವು ವಿಂಡೀಸ್ ವಿರುದ್ಧ ಏಳನೇ ನೇರ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ವಿಂಡೀಸನ್ನು ಸುಲಭವಾಗಿ ಮಣಿಸಿದ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಆತಿಥೇಯರು ಕಳೆದ ತಿಂಗಳು ತವರಿನಲ್ಲಿ ನಡೆದ ಸರಣಿಯಲ್ಲಿ ಬಾಂಗ್ಲಾದೇಶವನ್ನು 2-1 ಅಂತರದಿಂದ ಸೋಲಿಸಿತ್ತು. ಭಾರತ ಅಂತರ್‌ರಾಷ್ಟ್ರೀಯ ಟ್ವೆಂಟಿ-20 ಪಂದ್ಯವೊಂದರಲ್ಲಿ ದೊಡ್ಡ ಸವಾಲನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆಲುವು ದಾಖಲಿಸಿದೆ. ಕೆ.ಎಲ್. ರಾಹುಲ್ 40 ಎಸೆತಗಳಲ್ಲಿ 62 ಗಳಿಸಿ ಅಡಿಪಾಯ ಹಾಕಿಕೊಟ್ಟರು. ನಾಯಕ ವಿರಾಟ್ ಕೊಹ್ಲಿ ವೃತ್ತಿಜೀವನದ ಅತ್ಯುತ್ತಮ 94 ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಗಾಯಾಳು ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಅವಕಾಶ ಗಿಟ್ಟಿಕೊಂಡ ರಾಹುಲ್ ಅವರು ಉತ್ತಮವಾಗಿ ಆಡಿದರು. ಕೊಹ್ಲಿ ನೇತೃತ್ವದಲ್ಲಿ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನವನ್ನು ನೀಡಿದರೆ, ಬೌಲರ್‌ಗಳು ಎವಿನ್ ಲೂಯಿಸ್, ಶಿಮ್ರಾನ್ ಹೆಟ್ಮೆಯರ್ ಮತ್ತು ನಾಯಕ ಕೀರನ್ ಪೊಲಾರ್ಡ್ ಅವರ ಸ್ಫೋಟಕ ಹೊಡೆತಗಳ ಮುಂದೆ ಕೈ ಸುಟ್ಟುಕೊಂಡರು. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಹಿಂದಿನ ಸರಣಿಯಲ್ಲಿ ಪ್ರಭಾವಶಾಲಿಯಾಗಿದ್ದ ದೀಪಕ್ ಚಹರ್ ಅವರು ಕೇವಲ ಒಂದು ವಿಕೆಟ್ ಪಡೆದರು. 54 ರನ್ ಬಿಟ್ಟುಕೊಟ್ಟರು. ತಂಡಕ್ಕೆ ವಾಪಸಾಗಿದ್ದ ಭುವನೇಶ್ವರ್ ಕುಮಾರ್ ತನ್ನ ನಾಲ್ಕು ಓವರ್‌ಗಳಲ್ಲಿ 36 ರನ್ ನೀಡಿದರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ವಾಷಿಂಗ್ಟನ್ ಸುಂದರ್ ವಿಫಲರಾದರು. ಫೀಲ್ಡಿಂಗ್ ವಿಭಾಗದಲ್ಲೂ ಸುಂದರ್ ಮತ್ತು ರೋಹಿತ್ ಶರ್ಮಾ ಹಲವು ಕ್ಯಾಚ್‌ಗಳನ್ನು ಕೈ ಚೆಲ್ಲಿದರು. ವಿಂಡೀಸ್ ಮತ್ತೆ ಪುಟಿದೇಳಲು ಮತ್ತು ಸರಣಿಯನ್ನು ಜೀವಂತವಾಗಿಡಲು ಎರಡನೇ ಪಂದ್ಯದಲ್ಲಿ ಗೆಲ್ಲಬೇಕಾಗಿದೆ. ಪೇಸರ್ ವಿಲಿಯಮ್ಸ್ 3.4 ಓವರ್‌ಗಳಲ್ಲಿ 60 ರನ್‌ಗಳನ್ನು ಬಿಟ್ಟುಕೊಟ್ಟರು. ಅನುಭವಿ ಜೇಸನ್ ಹೋಲ್ಡರ್ 46 ರನ್ ನೀಡಿದರೂ ವಿಕೆಟ್ ಪಡೆಯಲಿಲ್ಲ. ಶೆಲ್ಡನ್ ಕಾಟ್ರೆಲ್ 24ಕ್ಕೆ 1 ವಿಕೆಟ್ ಪಡೆದರು. ವಿಂಡೀಸ್ ಇತರ 23 ರನ್ ಬಿಟ್ಟುಕೊಟ್ಟು ಸಮಸ್ಯೆಯಲ್ಲಿ ಸಿಲುಕಿತು. ವಿಂಡೀಸ್ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಲು ವಿಫಲವಾಗಿದೆ ಎಂದು ವಿಂಡೀಸ್ ನಾಯಕ ಪೊಲಾರ್ಡ್ ಒಪ್ಪಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News