ಅಶ್ವಿನ್ ದಾಖಲೆ ಸರಿಗಟ್ಟಿದ ಯಜುವೇಂದ್ರ ಚಹಾಲ್

Update: 2019-12-07 17:48 GMT

ಹೈದರಾಬಾದ್, ಡಿ.7: ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಶುಕ್ರವಾರ ನಡೆದ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಯಜುವೇಂದ್ರ ಚಹಾಲ್ ಶಿಮ್ರಾನ್ ಹೆಟ್ಮೆಯರ್ ಮತ್ತು ಕೀರನ್ ಪೊಲಾರ್ಡ್ ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಡೆದ ವಿಕೆಟ್‌ಗಳ ಸಂಖ್ಯೆಯನ್ನು 52ಕ್ಕೆ ಏರಿಸಿದರು. ಆ ಮೂಲಕ ಅಶ್ವಿನ್ ದಾಖಲೆಯನ್ನು ಸರಿಗಟ್ಟಿದರು. ಈ ಪಂದ್ಯದಲ್ಲಿ ಯಜುವೇಂದ್ರ ಚಹಾಲ್ 4 ಓವರ್‌ಗಳಲ್ಲಿ 36 ರನ್‌ಗಳಿಗೆ 2 ವಿಕೆಟ್ ಪಡೆದರು

ಅಶ್ವಿನ್ 46 ಪಂದ್ಯಗಳಲ್ಲಿ 22.94 ಸರಾಸರಿಯಲ್ಲಿ 52 ವಿಕೆಟ್ ಗಳಿಸಿದ್ದಾರೆ. ಚಹಾಲ್ ತನ್ನ 35 ನೇ ಪಂದ್ಯದಲ್ಲಿ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಬುಮ್ರಾ ವೇಗವಾಗಿ 50 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಅಶ್ವಿನ್ ಮತ್ತು ಬುಮ್ರಾ (51) ಬಳಿಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬೌಲರ್ ಚಹಾಲ್. ಕಳೆದ ತಿಂಗಳು ನಾಗ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧದ 3ನೇ ಟ್ವೆಂಟಿ-20 ಪಂದ್ಯದಲ್ಲಿ 50 ವಿಕೆಟ್‌ಗಳ ಮೈಲುಗಲ್ಲು ತಲುಪಿದ್ದರು.

ಚಹಾಲ್ ಕೇವಲ 34 ಪಂದ್ಯಗಳಲ್ಲಿ 50 ವಿಕೆಟ್ ಗಳಿಸಿದರು. ಬುಮ್ರಾ 41 ಮತ್ತು ಅಶ್ವಿನ್ 42 ಪಂದ್ಯಗಳಲ್ಲಿ 50 ವಿಕೆಟ್ ಗಳಿಸಿದ್ದಾರೆ. 32 ಬೌಲರ್‌ಗಳು ಟ್ವೆಂಟಿ-20ಯಲ್ಲಿ 50 ವಿಕೆಟ್‌ಗಳನ್ನು ಪಡೆದಿದ್ದಾರೆ. ಶ್ರೀಲಂಕಾದ ಅಜಂತಾ ಮೆಂಡಿಸ್ ಕೇವಲ 26 ಪಂದ್ಯಗಳಲ್ಲಿ 50 ವಿಕೆಟ್ ಪಡೆದಿದ್ದಾರೆ. ಭುವನೇಶ್ವರ್ ಕುಮಾರ್ 4 ತಿಂಗಳುಗಳ ಬಳಿಕ ಟ್ವೆಂಟಿ-20 ಕ್ರಿಕೆಟ್‌ಗೆ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News