ಮಾಲ್ದೀವ್ಸ್ ಮಹಿಳಾ ಕ್ರಿಕೆಟ್ ತಂಡ 8 ರನ್‌ಗೆ ಆಲೌಟ್

Update: 2019-12-07 17:53 GMT

ಕಠ್ಮಂಡು, ಡಿ.7: ಹದಿಮೂರನೇ ದಕ್ಷಿಣ ಏಶ್ಯನ್ ಗೇಮ್ಸ್‌ನಲ್ಲಿ ಶನಿವಾರ ಮಾಲ್ದೀವ್ಸ್ ಮಹಿಳಾ ಕ್ರಿಕೆಟ್ ತಂಡ ಆತಿಥೇಯ ನೇಪಾಳ ವಿರುದ್ಧ ಕೇವಲ ಎಂಟು ರನ್‌ಗಳಿಗೆ ಆಲೌಟಾಗಿದೆ.

ಇದರೊಂದಿಗೆ ಮಾಲ್ದೀವ್ಸ್ ಹೀನಾಯ ಸೋಲು ಅನುಭವಿಸಿತು.ಇದು ಟ್ವೆಂಟಿ-20 ಕ್ರಿಕೆಟ್‌ನ ಇತಿಹಾಸದಲ್ಲಿ ಎರಡನೇ ಅತಿ ಕಡಿಮೆ ಮೊತ್ತವಾಗಿದೆ.

ಮಹಿಳಾ ಕ್ರಿಕೆಟ್‌ನಲ್ಲಿ 8ನೇ ರ್ಯಾಂಕಿಂಗ್‌ನ ಮಾಲ್ದೀವ್ಸ್ ತಂಡ ಮಹಿಳೆಯರ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ಕಡಿಮೆ ಮೊತ್ತ ದಾಖಲಿಸಿತು.

ಮಾಲ್ದೀವ್ಸ್ ಕಳೆದ ಜೂನ್‌ನಲ್ಲಿ ರುವಾಂಡಾ ವಿರುದ್ಧ 6 ರನ್ ಗಳಿಸಿತ್ತು. ಆ ಬಳಿಕ ಇದೀಗ ಮಾಲ್ದೀವ್ಸ್ ಎರಡನೇ ಕನಿಷ್ಠ ಮೊತ್ತದ ದಾಖಲೆಯನ್ನು ನಿರ್ಮಿಸಿದೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಮಾಲ್ದೀವ್ಸ್‌ನ ಬ್ಯಾಟಿಂಗ್ ಆರಂಭದಲ್ಲೇ ಸೊರಗಿತು. ಒಟ್ಟು 8 ರನ್ ಮೊತ್ತದಲ್ಲಿ 7 ರನ್‌ಗಳು ಇತರೆ ರನ್‌ಗಳ ಮೂಲಕ ಜಮೆ ಆಗಿತ್ತು. ಇವೆಲ್ಲವೂ ಅಗಲ(ವೈಡ್) ಎಸೆತದ ಮೂಲಕ ತಂಡದ ಖಾತೆಗೆ ಜಮೆ ಆಗಿತ್ತು.

ಆರಂಭಿಕ ಆಟಗಾರ್ತಿ ಐಮಾ ಆಯಿಷಾತ್ (1) ಏಕೈಕ ರನ್ ಗಳಿಸಿದರು. ಬಳಿಕ ಕ್ರೀಸ್‌ಗೆ ಆಗಮಿಸಿದ ಎಲ್ಲರೂ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ಒಂಬತ್ತು ಆಟಗಾರ್ತಿಯರು 11.3 ಓವರ್‌ಗಳನ್ನು ಎದುರಿಸಿದರೂ ಯಾರಿಂದಲೂ ತಮ್ಮ ವೈಯಕ್ತಿಕ ಖಾತೆಗೆ ರನ್ ಸೇರಿಸಲು ಸಾಧ್ಯವಾಗಲಿಲ್ಲ.

ನಾಯಕಿ ಝುನಾ ಮರಿಯಮ್ ಮಾಲ್ದೀವ್ಸ್ ಪರ ಕ್ರೀಸ್‌ನಲ್ಲಿ ಅತಿ ಹೆಚ್ಚು ಕಾಲ ತಳವೂರಿದರು. ನೇಪಾಳದ ಕರುಣಾ ಭಂಡಾರಿ ಅವರ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರುವ ಮೊದಲು 16 ಎಸೆತಗಳನ್ನು ಎದುರಿಸಿದರು. ಅವರ ಬ್ಯಾಟ್‌ನಿಂದ ರನ್ ಸಿಡಿಯಲಿಲ್ಲ.

ನೇಪಾಳ ಪರ ಅಂಜಲಿ ಚಂದ್ 1 ರನ್‌ಗೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಇದಕ್ಕೆ ಉತ್ತರವಾಗಿ ನೇಪಾಳದ ಆರಂಭಿಕ ಆಟಗಾರರಾದ ಕಾಜಲ್ ಶ್ರೇಷ್ಠಾ ಮತ್ತು ರೋಮಾ ಥಾಪಾ ಕೇವಲ ಏಳು ಎಸೆತಗಳಲ್ಲಿ ಹೆಚ್ಚು ಗಡಿಬಿಡಿಯಿಲ್ಲದೆ ವಿಕೆಟ್ ನಷ್ಟವಿಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News